ಧಾರವಾಡ: ಶಹರದ ಖಾಸಗಿ ಶಾಲೆಗಳಿಗೆ ತೆರಳುತ್ತಿದ್ದ ಗ್ರಾಮದ ಮಕ್ಕಳನ್ನು ತನ್ನತ್ತ ಸೆಳೆಯುವಲ್ಲಿ ತಾಲೂಕಿನ ಮನಗುಂಡಿಯ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಶಸ್ವಿಯಾಗಿದೆ.
ಕೆಸರುಗದ್ದೆಯಂತಾದ ಆವರಣ, ಶಿಥಿಲಾವಸ್ಥೆಯಲ್ಲಿದ್ದ ನಲಿ-ಕಲಿ ಕೊಠಡಿಗಳು ಹೊಸ ರೂಪ ಪಡೆದುಕೊಂಡಿದ್ದು, ಧಾರವಾಡದತ್ತ ಆಂಗ್ಲ ಮಾಧ್ಯಮಕ್ಕೆ ಮುಖ ಮಾಡಿದ್ದ ಮಕ್ಕಳು ಮರಳಿ ಗ್ರಾಮದ ಶಾಲೆಯ ಕನ್ನಡ ಮಾಧ್ಯಮಕ್ಕೆ ಮರಳಿದ್ದಾರೆ.
ಮಕ್ಕಳನ್ನು ಆಕರ್ಷಿಸಲು ವಿಶಿಷ್ಟ ಹೆಜ್ಜೆ ಇಟ್ಟಿರುವ ಶಾಲೆ ಆಡಳಿತ ಮಂಡಳಿ, ರೈಲು ಬೋಗಿಯಂತೆ ಕಾಣುವ ವಿನ್ಯಾಸವನ್ನು ಕೊಠಡಿಗಳ ಹೊರಾಂಗಣಕ್ಕೆ ರೂಪಿಸಿ ಗಮನ ಸೆಳೆದಿದೆ. ಗೋಡೆಗಳಿಗೆ ರೈಲು ಬೋಗಿಗಳಂತೆ ನೀಲಿ ಬಣ್ಣ ಬಳಿಯಲಾಗಿದೆ. ಕೊಠಡಿಯ ಬಾಗಿಲಲ್ಲಿ ನಿಂತು ಇಣುಕಿದರೆ ರೈಲು ಬೋಗಿಯಿಂದ ಇಣುಕಿದಂತೆಯೇ ಕಾಣುತ್ತದೆ. ನಲಿ-ಕಲಿ ವಿಭಾಗದ ಐದು ಕೊಠಡಿಗಳಿಗೆ ರೈಲಿನಂತೆ ವಿನ್ಯಾಸ ಮಾಡಲಾಗಿದೆ.
ಹಳೇ ವಿದ್ಯಾರ್ಥಿಗಳ ಸಹಕಾರ: ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ 15 ಸಾವಿರ ವೆಚ್ಚದಲ್ಲಿ ಕೊಠಡಿಗಳಿಗೆರೈಲಿನ ರೂಪ ನೀಡಲಾಗಿದೆ. ಶಾಲೆ ದುರಸ್ತಿ ಕಾರ್ಯದೊಂದಿಗೆ ಈ ಕಾರ್ಯವನ್ನೂ ಮಾಡಲಾಗಿದೆ.ಕೆಸರಿನ ಗದ್ದೆಯಾಗಿದ್ದ ಶಾಲೆ ಆವರಣವನ್ನು ಸುಸಜ್ಜಿತ ಮಾಡಲಾಗಿದೆ. ಶಾಲೆಯ ಪೂರಕ ಚಟುವಟಿಕೆಗೆಬೇಕಾದ ವಸ್ತುಗಳನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ದಾನಿಗಳ ಮೂಲಕ ಪಡೆದಿದ್ದಾರೆ. ಶಾಲೆಯಲ್ಲಿ ಒಟ್ಟು 402 ವಿದ್ಯಾರ್ಥಿಗಳಿದ್ದು, ನಲಿ-ಕಲಿ ವಿಭಾಗದಲ್ಲಿ 186 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಶಿಕ್ಷಕರು, ಎಸ್‌ಡಿಎಂಸಿ, ಪಾಲಕರು, ಸ್ಥಳೀಯ ಶಿಕ್ಷಣ ಪ್ರೇಮಿಗಳು ಕೈಜೋಡಿಸಿದ್ದಾರೆ.
ಇದನ್ನೂ ಓದಿ : ಸಚಿವರಾಗುವ ಆಸೆ ಆಕಾಂಕ್ಷೆ ಎಲ್ಲರಿಗೂ ಇರುತ್ತೆ, ಆದರೆ.. ವಿಶ್ವನಾಥ್ ಗೆ ಸವದಿ ಕಿವಿಮಾತು
ಮಕ್ಕಳಿಗೆ ಬೇಕಾದ ಸೌಲಭ್ಯ ಕಲ್ಪಿಸಿ ಅವರನ್ನು ಕಲಿಕೆಯಲ್ಲಿ ತೊಡಗಿಸಬೇಕೆಂಬಉದ್ದೇಶದಿಂದ ಈ ವಿನೂತನ ಪ್ರಯೋಗ ಮಾಡಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ. ಇದರಿಂದ ಶಾಲೆಯ ಸಮಗ್ರ ಪಗತಿಯೊಂದಿಗೆ ಮಕ್ಕಳದಾಖಲಾತಿಯೂ ಹೆಚ್ಚಾಗಿದೆ. –
ಶಾರದಾ ಜಯರಾಮನವರ, ಮುಖ್ಯ ಶಿಕ್ಷಕಿ, ಮನಗುಂಡಿ
ಮಕ್ಕಳನ್ನು ಆಕರ್ಷಿಸಲು ರೈಲು ಎಂಜಿನ್ ಮತ್ತು ಡಬ್ಬಿಗಳ ತರಹ ಚಿತ್ರ ಬಿಡಿಸಿದ್ದೇವೆ. ಧಾರವಾಡದ ಖಾಸಗಿ ಶಾಲೆಗೆ ಹೋಗುತ್ತಿದ್ದ 32 ಮಕ್ಕಳು ಶಾಲೆಯ ವಿವಿಧ ತರಗತಿಯಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶ ಪಡೆದಿದ್ದು, ನಮ್ಮ ಪ್ರಯತ್ನಕ್ಕೆ ಸ್ಪಂದನೆ ಲಭಿಸಿದೆ. ಶಾಲೆ ವಂಚಿತ ಮಕ್ಕಳನ್ನೂ ಶಾಲೆಯತ್ತ ಸೆಳೆಯಲೂ ಪ್ರಯತ್ನಿಸಿದ್ದೇವೆ.
– ನಿಂಗಪ್ಪ ಹಡಪದ, ಅಧ್ಯಕ್ಷ, ಎಸ್‌ಡಿಎಂಸಿ, ಮನಗುಂಡಿ
–ಶಶಿಧರ್ ಬುದ್ನಿ