Advertisement

ಶಾಲೆ ಉಳಿಸಿ ಎನ್ನುವವರದ್ದೇ ನಿರ್ಲಕ್ಷ್ಯ

04:09 PM Jun 19, 2022 | Team Udayavani |

ಮಂಡ್ಯ: ಸರ್ಕಾರಿ ಶಾಲೆ ಉಳಿಸಬೇಕು ಎಂದು ಸರ್ಕಾರ, ಸಂಘ-ಸಂಸ್ಥೆಗಳು ಉದ್ದುದ್ದ ಭಾಷಣ ಬಿಗಿಯುತ್ತಿವೆ. ಆದರೆ, ಸರ್ಕಾರಿ ಶಾಲೆಗಳ ದುಸ್ಥಿತಿ ಮಾತ್ರ ಹೇಳ ತೀರದಾಗಿದೆ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗುವಂತಾಗಿದೆ.

Advertisement

ಮಳೆ ಬಂದರೆ ನೀರು ಸೋರುವ ಮೂಲಕ ಮಕ್ಕಳ ಪಾಠಕ್ಕೆ ತೊಂದರೆಯಾಗುತ್ತಿದೆ. ಇದು, ಮಂಡ್ಯ ತಾಲೂಕಿನ ಕೆಂಚನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಸುಮಾರು 60 ವರ್ಷಗಳ ಇತಿಹಾಸವಿರುವ ಶಾಲೆ ಈಗ ಶಿಥಿಲಾವಸ್ಥೆಯ ಲ್ಲಿದೆ. ಮಕ್ಕಳು ಜೀವ ಕೈಯಲ್ಲಿಡಿದು ಪಾಠ ಕೇಳುವ ಪರಿಸ್ಥಿತಿ ಉಂಟಾಗಿತ್ತು. ಇದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಆದರೆ, ಗ್ರಾಮಸ್ಥರು ಗ್ರಾಮದಲ್ಲಿಯೇ ಇರುವ ಸಮು ದಾಯ ಭವನದಲ್ಲಿ ಶಾಲೆ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.

ಸಮುದಾಯ ಭವನದಲ್ಲಿ ತರಗತಿ: ಶಾಲೆ ಶಿಥಿಲಗೊಂಡಿರುವುದರಿಂದ ಮಕ್ಕಳು ಸಮುದಾಯ ಭವನದಲ್ಲಿ ಪಾಠ ಕಲಿಯುವಂತಾಗಿದೆ. ಶಿಥಿಲಗೊಂಡು ವರ್ಷಗಳೇ ಕಳೆದಿವೆ. ಕಳೆದ ಪೂರ್ವ ಮುಂಗಾರು ಮಳೆಯಿಂದ ತೆಂಗಿನ ಮರ ಬಿದ್ದು ಶಾಲೆಗೆ ಹಾನಿಯಾಗಿದೆ. ಮಕ್ಕಳ ತರಗತಿಗೆ ತೊಂದರೆ ಉಂಟಾಗಿದ್ದರೂ ಇಲಾಖೆಯಾಗಲೀ ಅಥವಾ ಸರ್ಕಾರವಾಗಲೀ ಇದುವರೆಗೂ ಸ್ಪಂದಿಸಿಲ್ಲ.

ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲ: ಶಾಲೆ ಯಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ಮಕ್ಕಳ ಕ್ರೀಡೆಗೂ ಸರಿಯಾದ ಮೈದಾನವಿಲ್ಲ. ಇರುವ ಚಿಕ್ಕ ಮೈದಾನದಲ್ಲೂ ಅಂಗನ ವಾಡಿ ಕೇಂದ್ರ ತೆರೆಯಲಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ವಾತಾವರಣಕ್ಕೆ ತೊಂದರೆಯಾಗಿದೆ. ಅಲ್ಲದೆ, 1ರಿಂದ 5ರವರೆಗೂ ತರಗತಿ ನಡೆಯುತ್ತಿದ್ದು, ಒಬ್ಬರೇ ಶಿಕ್ಷಕರಿದ್ದಾರೆ.

ಹಲವಾರು ಬಾರಿ ಮನವಿ: ಗ್ರಾಮಸ್ಥರು ಶಾಲೆ ದುರಸ್ತಿ ಮಾಡಬೇಕು. ಇಲ್ಲವೇ ಹೊಸದಾಗಿ ಎರಡು ಕೊಠಡಿಗಳ ಮಂಜೂರು ಮಾಡಿ ನಿರ್ಮಾಣ ಮಾಡಬೇಕು ಎಂದು ಹಲವಾರು ಬಾರಿ ಶಿಕ್ಷಣ ಇಲಾಖೆ, ಜನಪ್ರತಿನಿ ಧಿಗಳು, ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೇಳಿದಾಗ ನೂತನ ಕೊಠಡಿಗಳ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಆದರೆ ಇದುವರೆಗೂ ಹಣ ಬಿಡುಗಡೆಯಾಗಿಲ್ಲ ಎಂಬ ಸಬೂಬು ಹೇಳುತ್ತಾರೆ ಎಂದು ಗ್ರಾಮದ ಮುಖಂಡ ಪುಟ್ಟಸ್ವಾಮಿ ಹೇಳುತ್ತಾರೆ.

Advertisement

 48ರಿಂದ 18ಕ್ಕಿಳಿದ ಮಕ್ಕಳ ದಾಖಲಾತಿ ಸಂಖ್ಯೆ : ಶಾಲೆಯು 1ರಿಂದ 5ನೇ ತರಗತಿವರೆಗೆ ಇದೆ. ಸದ್ಯ ಎರಡು ಕೊಠಡಿಯಲ್ಲಿ ಶಾಲೆ ನಡೆಯುತ್ತಿತ್ತು. ಆದರೆ, ಶಾಲೆ ಶಿಥಿಲಗೊಂಡಿರುವುದರಿಂದ ಮಕ್ಕಳ ಪೋಷಕರು ಶಾಲೆಗೆ ಕಳುಹಿಸುತ್ತಿಲ್ಲ. ಇದರಿಂದ ಪ್ರಸ್ತುತ ಸಾಲಿನಲ್ಲಿ ದಾಖಲಾತಿ ಪ್ರಮಾಣ ಇಳಿಕೆಯಾಗಿದೆ. ಮೊದಲು 1ರಿಂದ 5ನೇ ತರಗತಿವರೆಗೆ ಸುಮಾರು 48 ಮಕ್ಕಳಿದ್ದರು. ಆದರೆ, ಈಗ ಅದರ ಸಂಖ್ಯೆ 18ಕ್ಕೆ ಇಳಿದಿದೆ. ಗ್ರಾಮದಲ್ಲಿ ಬಹುತೇಕ ಬಡವರು ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಆದರೆ ಕೊಠಡಿಗಳು ಸಂಪೂರ್ಣ ಹಾಳಾಗಿರುವುದರಿಂದ ಪೋಷಕರು ಹೆದರುತ್ತಿದ್ದಾರೆ. ಈಗಾಗಲೇ ಗ್ರಾಮದಲ್ಲಿ ಕೆಲವು ಮಕ್ಕಳ ಪೋಷಕರು ದುಡ್ಡಿಲ್ಲದಿದ್ದರೂ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಬೇರೆ ಕಡೆ ಖಾಸಗಿ ಶಾಲೆಗಳಿಗೆ ಕಳುಹಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆ ಸುಮಾರು 60 ವರ್ಷಗಳ ಹಳೆಯದು. ಹೊಸ ಕೊಠಡಿಗೆ ಸಾಕಷ್ಟು ಬಾರಿ ಅಧಿ ಕಾರಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಮೇ ನಿಂದ ಶಾಲೆ ಆರಂಭವಾಗಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗ ದಿರಲೆಂದು ಗ್ರಾಮದ ಸಮುದಾಯ ಭವನದಲ್ಲಿ ತರಗತಿ ನಡೆಸಲಾಗುತ್ತಿದೆ. ಸರ್ಕಾರ, ಇಲಾಖೆ ಗಮನಹರಿಸಬೇಕಿದೆ. – ಪುಟ್ಟಸ್ವಾಮಿ, ಗ್ರಾಮದ ಮುಖಂಡ

 

– ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next