ಬೆಳಗಾವಿ: ರೈತರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕೃಷಿ ಕಾಯ್ದೆ ಜಾರಿಗೆ ತರುತ್ತಿದೆ. ಒಂದು ವೇಳೆ ರೈತರಿಗೆ ಸಮಸ್ಯೆಯಾದರೆ ಕಾಯ್ದೆ ಹಿಂಪಡೆಯಲು ಪ್ರಧಾನಿ ಮೋದಿ ಸಿದ್ಧರಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತಾಸಕ್ತಿ ಬದಿಗೊತ್ತಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ ರೈತ ತಾನು ಬೆಳೆದ ಬೆಳೆಯನ್ನು ಮುಕ್ತವಾಗಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ನೀಡುವ ಮೂಲಕ ರೈತರಿಗೆ ಸರ್ಕಾರ ಅನುಕೂಲ ಮಾಡಿ ಕೊಟ್ಟಿದೆ ಎಂದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಮುಕ್ತ ಅವಕಾಶ ಮಾಡಿಕೊಡಲಾಗಿದೆ. ರೈತರು ಹೋರಾಟ ಕೈ ಬಿಟ್ಟು ಕಾಯ್ದೆ ಒಪ್ಪಿಕೊಳ್ಳಬೇಕು. ರೈತ ವಿರೋಧಿಯಾಗಿದ್ದರೆ ಕಾನೂನು ಬದಲಾಯಿಸಲು ಅವಕಾಶವಿದೆ. ಹೀಗಾಗಿ ಮೊಂಡುತನ ಬಿಟ್ಟು ಹೋರಾಟ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ಮೋದಿ ತಮ್ಮ ಅ ಕಾರವಧಿಯಲ್ಲಿ ಅನೇಕ ಜನಪರ ಯೋಜನೆ ನೀಡುತ್ತಿದ್ದಾರೆ. ಕೋವಿಡ್ ನಿಂದ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದರಿಂದ ಸಂಕಷ್ಟ ಅನುಭವಿಸಿದ್ದಾರೆ. ಹೀಗಾಗಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿದರು. ಕೇಂದ್ರ ಬಜೆಟ್ ನೋಡಿಕೊಂಡು ರಾಜ್ಯದಲ್ಲಿ ಯಾವ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂಬ ಕುರಿತು ಆದ್ಯತೆ ನೀಡಲಾಗುವುದು. ಫೆ. 9ರಂದು ನಮ್ಮ ಇಲಾಖೆಯ ಬಜೆಟ್ ಪೂರ್ವ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಉಡುಪಿ: ಸಂತೆಕಟ್ಟೆ ಬಳಿ ಸ್ಕೂಟರ್ ಸ್ಕಿಡ್ ಆಗಿ ಯುವಕ ಸ್ಥಳದಲ್ಲೇ ಸಾವು
ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪಾಲು ವಿಳಂಬ ಕುರಿತು ಪ್ರತಿಕ್ರಿಯಿಸಿದ ಅವರು, ಡಿಸೆಂಬರ್, ಜನೇವರಿಯಿಂದ ಆದಾಯ, ವ್ಯಾಪಾರ ವಹಿವಾಟು ಕಡಿಮೆಯಾಗಿದೆ. ಜಿಎಸ್‌ಟಿ ಒಂದೇ ಅಲ್ಲ, ತೆರಿಗೆ ಕಡಿಮೆಯಾಗಿದೆ. ಮೋಟಾರ್ ವಾಹನಗಳ ತೆರಿಗೆ ಕಡಿಮೆಯಾಗಿದೆ. ಹೀಗಾಗಿ ಅಬಕಾರಿ ಹೊರತುಪಡಿಸಿ ನಮಗೆ ನಿರೀಕ್ಷಿತ ಆದಾಯ ಬರಲಿಲ್ಲ ಎಂದು ತಿಳಿಸಿದರು.