Advertisement

PG: ಸರಕಾರಿ ಕೋಟಾ ವಿಳಂಬ: ಪಿಜಿ ಕೋರ್ಸ್‌ ಆಕಾಂಕ್ಷಿಗಳ ಆತಂಕ

10:41 PM Dec 29, 2023 | Team Udayavani |

ಬೆಂಗಳೂರು: ಎಂಬಿಎ, ಎಂಸಿಎ, ಎಂಟೆಕ್‌ ಮತ್ತು ಅರ್ಕಿಟೆಕ್ಚರ್‌ನ ಸ್ನಾತಕೋತ್ತರ ವಿಭಾಗದ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಇದರಿಂದಾಗಿ ಸರಕಾರಿ ಕೋಟಾದಡಿ ಉನ್ನತ ವ್ಯಾಸಂಗದ ಕನಸು ಕಾಣುತ್ತಿರುವ ರಾಜ್ಯದ ನೂರಾರು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಹಲವರು ಖಾಸಗಿ ವಿವಿಗಳನ್ನು ಸೇರುತ್ತಿದ್ದಾರೆ.

Advertisement

ಸೆ. 23 ಮತ್ತು 24ರಂದು ಪಿಜಿಸಿಇಟಿ ಪರೀಕ್ಷೆ ನಡೆದಿತ್ತು. 47 ಸಾವಿರ ಮಂದಿ ಎಂಬಿಎ, 15,722 ಮಂದಿ ಎಂಸಿಎ, 6,427 ಮಂದಿ ಎಂಟೆಕ್‌, 436 ಮಂದಿ ಅರ್ಕಿಟೆಕ್ಚರ್‌ ವಿಷಯದಲ್ಲಿ ಪಿಜಿಸಿಇಟಿ ಬರೆದಿದ್ದರು. ಪರೀಕ್ಷೆ ಬರೆದು 3 ತಿಂಗಳು ಕಳೆದಿದ್ದರೂ ಕೌನ್ಸೆಲಿಂಗ್‌ನ ದಿನಾಂಕ ಪ್ರಕಟಗೊಂಡಿಲ್ಲ. ಕೌನ್ಸೆಲಿಂಗ್‌ ದಿನದ ಬಗೆಗಿನ ಗೊಂದಲದ ಜತೆ ಪಿಜಿ ಕೋರ್ಸ್‌ಗೆ ಪ್ರವೇಶಕ್ಕೆ ತಡವಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಚಿಂತೆಗೆ ಕಾರಣವಾಗಿದೆ.

ಹಲವು ಖಾಸಗಿ ವಿವಿಗಳು, ಸ್ವಾಯತ್ತ ವಿವಿಗಳು ತಮ್ಮಲ್ಲಿನ ಸರಕಾರಿ ಕೋಟಾದ ಸೀಟುಗಳನ್ನು ತುಂಬದೆ ಬಾಕಿ ಉಳಿಸಿಕೊಂಡು ಉಳಿದ ಸೀಟುಗಳ ದಾಖಲಾತಿ ಆರಂಭಿಸಿವೆ. ಆ ವಿವಿಗಳಲ್ಲಿ ಶೀಘ್ರದಲ್ಲೇ ತರಗತಿ ಪ್ರಾರಂಭಗೊಳ್ಳಲಿದೆ. ಆದರೆ ಸರಕಾರಿ ಕೋಟಾದಡಿ ಸೀಟು ಹಂಚಿಕೆ ಮುಗಿದು ದಾಖಲಾತಿ ಪೂರ್ಣಗೊಳ್ಳಲು ಇನ್ನು ಕನಿಷ್ಠ ಒಂದು ತಿಂಗಳ ಸಮಯ ಅಗತ್ಯವಿದೆ ಎಂದು ಕೆಇಎಯ ಮೂಲಗಳು ಹೇಳುತ್ತಿವೆ. ಆದ್ದರಿಂದ ಸರಕಾರಿ ಕೋಟಾದ ಸೀಟು ಸಿಕ್ಕಿಯೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿರುವ ಆಕಾಂಕ್ಷಿಗಳು ಸರಕಾರಿ ಕೋಟಾಕ್ಕೆ ಕಾಯುವುದೇ ಅಥವಾ ಖಾಸಗಿ ವಿವಿಗಳಿಗೆ ಸೇರಿಕೊಳ್ಳುವುದೇ ಎಂಬ ಗೊಂದಲದಲ್ಲಿದ್ದಾರೆ.

ವರ್ಷದಿಂದ ವರ್ಷಕ್ಕೆ ಪಿಜಿಸಿಇಟಿ ಬರೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಿರುವುದು ಮತ್ತು ಉನ್ನತ ಶಿಕ್ಷಣದ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಪಿಜಿ ಸೀಟ್‌ಗೂ ಪೈಪೋಟಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ವಿದ್ಯಾರ್ಥಿಗಳು ಈಗಾಗಲೇ ಖಾಸಗಿ ವಿವಿ, ಸ್ವಾಯತ್ತ ವಿವಿಗಳಲ್ಲಿ ಎಂಬಿಎ, ಎಂಸಿಎ, ಎಂಟೆಕ್‌ಗೆ ಸೇರಿಕೊಂಡಿದ್ದಾರೆ.

ಕೌನ್ಸೆಲಿಂಗ್‌ ವಿಳಂಬಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ಸೀಟ್‌ ಮ್ಯಾಟ್ರಿಕ್ಸ್‌ ವಿಳಂಬ ಮಾಡಿರುವುದು ಕಾರಣ ಎಂದು ಕೆಇಎಯ ಅಧಿಕಾರಿಗಳು ಹೇಳುತ್ತಾರೆ. ಈಗ ಸೀಟ್‌ ಮ್ಯಾಟ್ರಿಕ್ಸ್‌ ಕೆಇಎಯ ಕೈಸೇರಿದ್ದರೂ ಶುಲ್ಕ ಸಂರಚನೆ ಇನ್ನೂ ಕೆಇಎ ತಲುಪಿಲ್ಲ. ಶುಲ್ಕ ಸಂರಚನೆ ಮಾಹಿತಿ ಸಿಗದೆ ಕೌನ್ಸೆಲಿಂಗ್‌ ದಿನಾಂಕ ಪ್ರಕಟಿಸಲು ಸಾಧ್ಯವಿಲ್ಲ ಎಂಬುದು ಕೆಇಎ ಅಭಿಪ್ರಾಯ.

Advertisement

ಕಳೆದ ವರ್ಷ ಸರಕಾರಿ ಶಿಕ್ಷಣ ಸಂಸ್ಥೆಗಳು, ವಿವಿ ಮತ್ತು ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಎಂಬಿಎ, ಎಂಸಿಎ ಮತ್ತು ಎಂಇ, ಎಂಟೆಕ್‌ಗೆ ವಾರ್ಷಿಕ ತಲಾ 20 ಸಾವಿರ ರೂ. ಬೋಧನ ಶುಲ್ಕವಿತ್ತು. ಅದೇ ರೀತಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎ, ಎಂಇ ಮತ್ತು ಎಂಟೆಕ್‌ಗೆ ವಾರ್ಷಿಕ ತಲಾ 55 ಸಾವಿರ ರೂ. ಬೋಧನ ಶುಲ್ಕ ನಿಗದಿಪಡಿಸಲಾಗಿತ್ತು. ಸುಮಾರು 25 ಸಾ. ರೂ.ಗಿಂತ ಹೆಚ್ಚು ಸೀಟುಗಳು ಸರಕಾರಿ ಕೋಟಾದಡಿ ಹಂಚಿಕೆಯಾಗಿತ್ತು.

ನಮಗೆ ಈಗಷ್ಟೆ ಸೀಟ್‌ ಮ್ಯಾಟ್ರಿಕ್ಸ್‌ ಸಿಕ್ಕಿದೆ. ಶುಲ್ಕ ಸಂರಚನೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಇನ್ನು ಎರಡ್ಮೂರು ದಿನಗಳಲ್ಲಿ ಶುಲ್ಕ ಸಂರಚನೆ ಮಾಹಿತಿ ಸಿಗುವ ನಿರೀಕ್ಷೆಯಿದೆ. ಹಾಗೆ ಸಿಕ್ಕಿದರೆ ಜನವರಿ 10ರ ಬಳಿಕ ಪಿಜಿ ಸಿಇಟಿ ಕೌನ್ಸೆಲಿಂಗ್‌ ಪ್ರಾರಂಭಿಸುತ್ತೇವೆ. ಒಮ್ಮೆ ಕೌನ್ಸೆಲಿಂಗ್‌ ಆರಂಭಿಸಿದರೆ 15 ದಿನಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಲಿದೆ.
– ಎಸ್‌.ರಮ್ಯಾ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ

ಪಿಜಿಸಿಇಟಿ ಕೌನ್ಸೆಲಿಂಗ್‌ ವಿಳಂಬವಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ತಂದಿದೆ. ನಾಲ್ಕು ವರ್ಷಗಳಿಂದ ಯುಜಿಸಿಇಟಿ ಮತ್ತು ಪಿಜಿಸಿಇಟಿಯ ಕೌನ್ಸೆಲಿಂಗ್‌ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ. ಅಷ್ಟರಲ್ಲಿ ಖಾಸಗಿ ವಿವಿಗಳು ತಮ್ಮಲ್ಲಿ ನೋಂದಣಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿರುತ್ತವೆ.
-ಅಜಯ್‌ ಕಾಮತ್‌, ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ ಕಾರ್ಯದರ್ಶಿ

 ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next