Advertisement

ಸುಜೀರಿಗೆ ಸ.ಪ.ಪೂ.ಕಾಲೇಜು?

12:21 PM Dec 01, 2022 | Team Udayavani |

ಬಂಟ್ವಾಳ: ಪುದು ಹಾಗೂ ಮೇರಮಜಲು ಗ್ರಾಮ ಪಂಚಾಯತ್‌ ವ್ಯಾಪ್ತಿಯನ್ನು ಒಳಗೊಂಡಂತೆ ಸರಕಾರಿ ಪದವಿ ಪೂರ್ವ ಕಾಲೇಜು ಬೇಡಿಕೆ ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಇದೀಗ ಫರಂಗಿಪೇಟೆ ಸಮೀಪದ ಸುಜೀರಿನಲ್ಲಿ ಪ.ಪೂ. ಕಾಲೇಜು ಅನುಷ್ಠಾನಕ್ಕೆ ಸಂಬಂಧಿಸಿ ಸ್ಥಳೀಯ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಆಧಾರದಲ್ಲಿ ಸರಕಾರಕ್ಕೆ ಪ್ರಸ್ತಾವನೆಯೊಂದು ಸಲ್ಲಿಕೆಯಾಗಿದೆ.

Advertisement

ದ.ಕ.ಪ.ಪೂ. ಶಿಕ್ಷಣ ಇಲಾಖೆಯ ಮೂಲಕ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್‌ ಅವರು ಪ್ರಸ್ತಾವನೆ ಸಲ್ಲಿಸಿದ್ದು, ಸರಕಾರದಿಂದ ಸಕಾರಾತ್ಮಕ ಸ್ಪಂದನೆ ಲಭಿಸಿದರೆ ಪ.ಪೂ. ಕಾಲೇಜಿನ ಬೇಡಿಕೆ ಈಡೇರಲಿದೆ. ಪ್ರಸ್ತುತ ಎರಡು ಗ್ರಾ.ಪಂ. ವ್ಯಾಪ್ತಿಯ ಪುದು, ಮೇರಮಜಲು ಹಾಗೂ ಕೊಡ್ಮಾಣ್‌ ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಕಾಲೇಜುಗಳು ಇಲ್ಲದೆ ಇರುವುದರಿಂದ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಬೇರೆಡೆಗೆ ತೆರಳಬೇಕಾದ ಸ್ಥಿತಿ ಇದೆ.

2013ರಿಂದಲೂ ಈ ಭಾಗದಲ್ಲಿ ಪ.ಪೂ. ಕಾಲೇಜಿನ ಅನುಷ್ಠಾನದ ಕುರಿತು ಪ್ರಯತ್ನಗಳು ನಡೆಯುತ್ತಿದ್ದು, ಹಿಂದೆ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‌ ಅವರಿಗೂ ಬೇಡಿಕೆ ಸಲ್ಲಿಕೆಯಾಗಿತ್ತು. ಸ್ಥಳೀಯ ಶಾಸಕರು ಕೂಡ ಗ್ರಾಮಸ್ಥರ ಬೇಡಿಕೆಗೆ ಪೂರಕವಾಗಿ ಸರಕಾರಕ್ಕೆ ಒತ್ತಡವನ್ನೂ ಹೇರಿದ್ದರು. ಈ ನಿಟ್ಟಿನಲ್ಲಿ ಪ್ರಸ್ತುತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ.

ಒಂದೇ ಆವರಣದಲ್ಲಿ ಹಲವು ಶಾಲೆ

ಪ್ರಸ್ತುತ ಸುಜೀರು ಪರಿಸರದಲ್ಲಿ ಸರಕಾರಿ ಹಿ.ಪ್ರಾ. ಶಾಲೆ, ಪ್ರೌಢಶಾಲೆ ಇದ್ದು, ಅದೇ ಸ್ಥಳದಲ್ಲಿ ಮೌಲಾನಾ ಅಝಾದ್‌ ಶಾಲಾ ಕಟ್ಟಡವೂ ನಿರ್ಮಾಣಗೊಳ್ಳುತ್ತಿದೆ. ಸದ್ಯಕ್ಕೆ ಮೌಲಾನಾ ಅಝಾದ್‌ ಸ್ಕೂಲ್‌ ಪುದು ಮಾಪÛ ಸರಕಾರಿ ಶಾಲೆಯಲ್ಲಿ ಕಾರ್ಯಚರಿಸುತ್ತಿದೆ. ಗ್ರಾಮಸ್ಥರ ಬೇಡಿಕೆಯ ಪ್ರಕಾರ ಇದೇ ಆವರಣದಲ್ಲಿ ಪ.ಪೂ. ಕಾಲೇಜು ಕೂಡ ಪ್ರಾರಂಭ ಗೊಳ್ಳಬೇಕು ಎನ್ನಲಾಗುತ್ತಿದೆ.

Advertisement

ಈ ಭಾಗದಲ್ಲಿ ಒಟ್ಟು 3.70 ಎಕ್ರೆ ಜಾಗವಿದ್ದು, ಅದರಲ್ಲಿ 90 ಸೆಂಟ್ಸ್‌ ಪ್ರೌಢಶಾಲೆ, 1 ಎಕ್ರೆಯಲ್ಲಿ ಮೌಲಾನಾ ಅಝಾದ್‌ ಸ್ಕೂಲ್‌ಗೆ ಮೀಸಲಿಡಲಾಗಿದೆ. ಉಳಿದಂತೆ ಜಾಗ ಪ್ರಾಥಮಿಕ ಶಾಲೆಯಲ್ಲಿದ್ದು, ಅದರಲ್ಲಿ ಒಂದು ಭಾಗದಲ್ಲಿ ಪದವಿ ಪೂರ್ವ ಕಾಲೇಜು ಪ್ರಾರಂಭವಾಗಬೇಕು ಎಂದು ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸ್ಥಳೀಯ ಶಾಲೆಗಳ ವಿದ್ಯಾರ್ಥಿ ಮಾಹಿತಿ

ಯಾವುದೇ ಪ್ರದೇಶಕ್ಕೆ ಶಾಲೆ ಅಥವಾ ಕಾಲೇಜು ಮಂಜೂರಾಗಬೇಕಾದರೆ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಅವರು ವಿದ್ಯಾಭ್ಯಾಸಕ್ಕೆ ಇತರ ಭಾಗಕ್ಕೆ ತೆರಳಬೇಕಾಗಿರುವ ಮಾಹಿತಿಯು ಅತೀ ಅಗತ್ಯವಾಗಿದೆ. ಅದರಂತೆ ಪುದು ಹಾಗೂ ಮೇರಮಜಲು ಭಾಗದ ಹಾಲಿ ಕಾರ್ಯಾಚರಿಸುತ್ತಿರುವ ಪ್ರೌಢಶಾಲೆಗಳಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಅದರ ಆಧಾರದಲ್ಲಿ ಮುಂದೆ ಸರಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪ್ರಸ್ತಾವನೆ ಸಲ್ಲಿಕೆ: ಪುದು, ಮೇರಮಜಲು ಭಾಗಕ್ಕೆ ಪ.ಪೂ. ಕಾಲೇಜು ಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಅದರಂತೆ ಪ್ರಸ್ತುತ ಸುಜೀರಿಗೆ ಕಾಲೇಜು ಮಂಜೂರು ಮಾಡುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮಂಗಳೂರು ಕ್ಷೇತ್ರಕ್ಕೆ 3 ಕಾಲೇಜುಗಳನ್ನು ಕೇಳಲಾಗಿದ್ದು, ದೇರಳ ಕಟ್ಟೆ ಮತ್ತು ಹರೇಕಳಕ್ಕೆ ಈಗಾಗಲೇ ಮಂಜೂರಾಗಿದೆ. ಈ ಪ್ರಸ್ತಾವಕ್ಕೂ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. –ಯು.ಟಿ. ಖಾದರ್‌, ಶಾಸಕರು, ಮಂಗಳೂರು ಕ್ಷೇತ್ರ

ಹಿಂದಿನಿಂದಲೂ ಬೇಡಿಕೆ: ನಮ್ಮ ಭಾಗದಲ್ಲಿ ಪ.ಪೂ. ಕಾಲೇಜು ಬೇಕು ಎಂದು ನಾವು ಶಾಸಕ ಯು.ಟಿ. ಖಾದರ್‌ ಅವರ ಮೂಲಕ ಪ್ರಯತ್ನ ಮಾಡುತ್ತಿದ್ದು, ಹಿಂದೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರು ಇರುವಾಗಲೂ ಬೇಡಿಕೆ ಸಲ್ಲಿಸಿದ್ದೆವು. ಪ್ರಸ್ತುತ ಶಾಸಕರ ಸೂಚನೆಯ ಮೇರೆಗೆ ಎಲ್ಲ ದಾಖಲೆಗಳು ಒಳಗೊಂಡು ಶಿಕ್ಷಣ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಕೆಯಾಗಿದೆ. –ಉಮ್ಮರ್‌ ಫಾರೂಕ್‌ ಫರಂಗಿಪೇಟೆ, ಜಿ.ಪಂ. ಮಾಜಿ ಸದಸ್ಯರು

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next