Advertisement

ಪುನಶ್ಚೇತನ ಪರ್ವ: ಹಲವು ಸುಧಾರಣ ಕ್ರಮಗಳಿಗೆ ಕೇಂದ್ರ ಸಂಪುಟ ಅಸ್ತು

11:45 PM Sep 15, 2021 | Team Udayavani |

ಹೊಸದಿಲ್ಲಿ: ದೂರಸಂಪರ್ಕ ಕ್ಷೇತ್ರದಲ್ಲಿ ಶೇ. 100 ವಿದೇಶಿ ನೇರ ಬಂಡವಾಳಕ್ಕೆ ಒಪ್ಪಿಗೆ, ದೇಶದ ಎಲ್ಲ ಜಿಲ್ಲೆಗಳಲ್ಲೂ ಸಂಯೋಜಿತ ಆರೋಗ್ಯ ಕೇಂದ್ರಗಳ ಸ್ಥಾಪನೆ, ಎಜಿಆರ್‌ ಬಾಕಿ ಪಾವತಿಗೆ ಟೆಲಿಕಾಂ ಕಂಪೆನಿಗಳಿಗೆ 4 ವರ್ಷಗಳ ಕಾಲಾವಕಾಶ, ಆಟೋಮೊಬೈಲ್‌ ಕ್ಷೇತ್ರಕ್ಕೆ ಉತ್ಪಾ ದನೆ ಆಧಾರಿತ ಪ್ರೋತ್ಸಾಹ ಧನ…

Advertisement

ಇವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ಕೈಗೊಂಡ ಅತೀ ಮಹತ್ವದ ಸುಧಾರಣಾ ಕ್ರಮಗಳು.

ಕೊರೊನಾ ಕಾರಣ ಸೊರಗಿರುವ ವಿವಿಧ ಕ್ಷೇತ್ರಗಳಿಗೆ ಪುನಶ್ಚೇತನ ನಿಟ್ಟಿನಲ್ಲಿ ಮಹತ್ವದ ಯೋಜನೆ ಗಳಿಗೆ ಒಪ್ಪಿಗೆ ನೀಡಲಾಗಿದೆ.

ಸಂಯೋಜಿತ ಆರೋಗ್ಯ ಕೇಂದ್ರ :

ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಯ ಅನುಷ್ಠಾನಕ್ಕಾಗಿ 64 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ದೇಶದ ಎಲ್ಲ ಜಿಲ್ಲೆಗಳು ಮತ್ತು 3,382 ಹೋಬಳಿಗಳಲ್ಲಿ ಸುಸಜ್ಜಿತ ಸಂಯೋಜಿತ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಎಲ್ಲ ರಾಜ್ಯಗಳಲ್ಲೂ 11,024 ನಗರ ಆರೋಗ್ಯ ಕೇಂದ್ರಗಳ ಸ್ಥಾಪನೆ, 15 ಆರೋಗ್ಯ ತುರ್ತು ಶಸ್ತ್ರಚಿಕಿತ್ಸಾ ಕೇಂದ್ರ, 2 ಸಂಚಾರಿ ಆಸ್ಪತ್ರೆ ಸೇರಿದಂತೆ ಹಲವು  ಗುರಿ ಹಾಕಿಕೊಳ್ಳಲಾಗಿದೆ. 2025- 26ರೊಳಗಾಗಿ ಇದರ ಅನುಷ್ಠಾನ ಪೂರ್ಣಗೊಳಿಸುವ ಉದ್ದೇಶವಿದೆ.

Advertisement

ಪ್ರೋತ್ಸಾಹ ಧನ:

ಆಟೋಮೊಬೈಲ್‌ ಕ್ಷೇತ್ರಕ್ಕೆ  26,058 ಕೋ.ರೂ.ಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಘೋಷಿಸಿದೆ. ಇದು ಹೊಸ ಹೂಡಿಕೆದಾರರಿಗೂ ನೆರವಾಗಲಿದೆ. ಬ್ಯಾಟರಿ ಚಾಲಿತ ವಾಹನಗಳು, ಜಲಜನಕ ಇಂಧನ ಆಧಾರಿತ ಸೆಲ್‌ ವೆಹಿಕಲ್‌ಗ‌ಳಿಗೆ ಉತ್ತೇಜನದ ಜತೆಗೆ ಸುಧಾರಿತ ಆಟೋ ಮೋಟಿವ್‌ ತಂತ್ರಜ್ಞಾನ, ಸಿಕೆಡಿ- ಎಸ್‌ಕೆಡಿ ಕಿಟ್‌ಗಳನ್ನು ತಯಾರಿಗೂ ಪ್ರೋತ್ಸಾಹ ಸಿಗಲಿದೆ.

ಇದರಿಂದ ದೇಶ  ಸಾಂಪ್ರದಾಯಿಕ ಇಂಧನ ವ್ಯವಸ್ಥೆ ಯಿಂದ ಪರಿಸರಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳತ್ತ ಮುಖ ಮಾಡಲು ಸಾಧ್ಯವಾಗಲಿದೆ ಎಂದು ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ಉದ್ಯೋಗ ಸೃಷ್ಟಿಗೆ ಒತ್ತು :

ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಪುಟ ಸಭೆ ಯಲ್ಲಿ ಆಟೋಮೊಬೈಲ್‌, ಆಟೋ ಬಿಡಿಭಾಗಗಳು ಹಾಗೂ ಡ್ರೋನ್‌ ಕ್ಷೇತ್ರಕ್ಕೂ ಕೇಂದ್ರ ಸರಕಾರ ಉತ್ಪಾ ದನೆ ಆಧಾರಿತ ಪ್ರೋತ್ಸಾಹ ಧನವನ್ನು ಘೋಷಿಸಿ  26,058 ಕೋಟಿ ರೂ. ಮೀಸಲಿಡಲು ನಿರ್ಧರಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಈ ಮೊತ್ತವನ್ನು ಉದ್ದಿಮೆಗಳಿಗೆ ನೀಡಲಾಗುತ್ತದೆ. ದೇಶದ ಉತ್ಪಾದನಾ ಜಿಡಿಪಿಯ

ಶೇ. 35ರಷ್ಟು ಪಾಲು ಆಟೋಮೊಬೈಲ್‌ ಕ್ಷೇತ್ರದ್ದಾಗಿರುವ ಕಾರಣ ಉದ್ಯೋಗ ಸೃಷ್ಟಿಗೆ ಭಾರೀ ಅನುಕೂಲವಾಗಲಿದೆ ಎಂದು ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಅನುಕೂಲವೇನು? :

 

  • ಸರಕಾರವೇ ಪ್ರೋತ್ಸಾಹ ಧನ ನೀಡುವುದರಿಂದ ಈ ಕ್ಷೇತ್ರಗಳಲ್ಲಿನ ಹಣಕಾಸಿನ ಅಭಾವ ತಗ್ಗಲಿದೆ
  • ಆಟೋಮೋಟಿವ್‌ ತಂತ್ರಜ್ಞಾನಗಳಲ್ಲಿ ಸುಧಾರಣೆಗಳನ್ನು ಜಾರಿ ಮಾಡಲು, ಜಾಗತಿಕ ಮಟ್ಟದಲ್ಲಿ ಭಾರತದ ಉದ್ದಿಮೆಗಳು ಹೆಸರು ಮಾಡಲು ಈ ಯೋಜನೆ ನೆರವಾಗಲಿದೆ.
  • ಆಟೋಮೊಬೈಲ್‌, ಆಟೋ ಬಿಡಿ ಭಾಗಗಳ ಕ್ಷೇತ್ರದಲ್ಲಿ 42,500 ಕೋಟಿ ರೂ. ಮೊತ್ತದ ಹೊಸ ಹೂಡಿಕೆಗಳು ಹರಿದುಬರಲಿವೆ. ರಫ್ತು ಪ್ರಮಾಣವೂ ಹೆಚ್ಚಾಗಲಿದೆ.
  • ಸುಮಾರು60 ಲಕ್ಷ ಹೆಚ್ಚುವರಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
  • ಸಾಂಪ್ರದಾಯಿಕ ಇಂಧನ ಆಧರಿತ ಆಟೋಮೊಬೈಲ್‌ ವ್ಯವಸ್ಥೆಯಿಂದ ಭಾರತವು ಪರಿಸರಸ್ನೇಹಿ, ಸುಸ್ಥಿರ, ಸ್ವತ್ಛ, ಸುಧಾರಿತ ಹಾಗೂ ದಕ್ಷ ವಿದ್ಯುತ್‌ಚಾಲಿತ ವಾಹನ ಆಧರಿತ ವ್ಯವಸ್ಥೆಗೆ ಪರಿವರ್ತನೆಯಾಗಲು ಸಾಧ್ಯ.

ದೂರಸಂಪರ್ಕ ಕ್ಷೇತ್ರದಲ್ಲಿ ಶೇ. 100 ಎಫ್ಡಿಐ :

ದೂರಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆ ಉದ್ದೇಶ ದಿಂದ ಕೇಂದ್ರ ಸಂಪುಟ ಹಲವು ಕ್ರಮ ಘೋಷಿಸಿದೆ. ಇದು ದೂರಸಂಪರ್ಕ ಕಂಪೆನಿ  ಗಳಿಗೆ ಮಾತ್ರವಲ್ಲದೇ ಮೊಬೈಲ್‌ ಬಳಕೆದಾರ ರಿಗೂ ನೆರವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ. ಗ್ರಾಹಕರ ಕೆವೈಸಿ ದಾಖಲೆ ಸಂಗ್ರಹಿಸಿಡುವುದು ದೊಡ್ಡ ಸವಾಲಾಗಿತ್ತು. ಇನ್ನು ಮುಂದೆ ಕೆವೈಸಿಯನ್ನು ಡಿಜಿಟಲೀಕರಣ ಗೊಳಿಸಲಿದ್ದೇವೆ ಎಂದೂ ತಿಳಿಸಿದ್ದಾರೆ.

ಸುಧಾರಣಾ ಕ್ರಮ :

  • ದೂರಸಂಪರ್ಕ ಕ್ಷೇತ್ರಕ್ಕೆ ಸಂಬಂಧಿಸಿ 9 ರಚನಾ ತ್ಮಕ, 5 ನಿರ್ವಹಣಾತ್ಮಕ ಸುಧಾರಣೆಗಳಿಗೆ ಒಪ್ಪಿಗೆ
  • ಎಜಿಆರ್‌(ಹೊಂದಾಣಿಕೆಯಾದ ಒಟ್ಟಾರೆ ಆದಾಯ) ವ್ಯಾಖ್ಯಾನದಲ್ಲಿ ಬದಲಾವಣೆ. ಟೆಲಿಕಾಂ ಕಂಪೆನಿಗಳ ದೂರಸಂಪರ್ಕೇತರ ಆದಾಯಕ್ಕೆ ಶುಲ್ಕ ಪಾವತಿಯಿಂದ ವಿನಾಯಿತಿ
  • ಎಲ್ಲ ಟೆಲಿಕಾಂ ಕಂಪೆನಿಗಳಿಗೂ ಎಜಿಆರ್‌ ಬಾಕಿ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶ.
  • ತರಂಗಾಂತರ (ಸ್ಪೆಕ್ಟ್ರಂ) ಹಂಚಿಕೆ ಮುಕ್ತ
  • ದೂರಸಂಪರ್ಕ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ನೇರ ಬಂಡವಾಳ(ಆಟೋಮ್ಯಾಟಿಕ್‌)ಕ್ಕೆ ಅನುಮತಿ
  • ಎಲ್ಲ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಅರ್ಜಿಗಳ ಡಿಜಿಟಲೀಕರಣ.
  • ಪೋಸ್ಟ್‌ಪೇಯ್ಡನಿಂದ ಪ್ರೀಪೇಯ್ಡಗೆ ಅಥವಾ ಪ್ರೀಪೇಯ್ಡನಿಂದ ಪೋಸ್ಟ್‌ಪೇಯ್ಡಗೆ ಬದಲಾಗಬೇಕೆಂದಿದ್ದರೆ, ಗ್ರಾಹಕರು ಪ್ರತ್ಯೇಕ ಕೆವೈಸಿ ಪ್ರಕ್ರಿಯೆಗೆ ಒಳಗಾಗಬೇಕಾದ ಅಗತ್ಯವಿಲ್ಲ.

ಷೇರುಪೇಟೆಯಲ್ಲಿ ಸಂಚಲನ :

ಮುಂಬಯಿ: ಸೊರಗಿರುವ ಭಾರ್ತಿ ಏರ್‌ಟೆಲ್‌, ವೊಡಾಫೋನ್‌, ಐಡಿಯಾದಂಥ ದೂರಸಂಪರ್ಕ ಕಂಪೆನಿಗಳು ಪಾವತಿಸಲು ಬಾಕಿಯಿರುವ ಕೋಟ್ಯಂತರ ರೂ. ಶುಲ್ಕ ಪಾವತಿಗೆ ಸರಕಾರಕ್ಕೆ 4 ವರ್ಷಗಳ ಕಾಲಾವಕಾಶ ನೀಡಿದೆ. ಪರಿಣಾಮ ಬುಧವಾರ ಈ ಕ್ಷೇತ್ರಗಳ ಷೇರುಗಳ ಖರೀದಿಗೆ  ಹೂಡಿಕೆದಾರರು ಮುಗಿಬಿದ್ದಿದ್ದು, ಸೆನ್ಸೆಕ್‌ ಮತ್ತು ನಿಫ್ಟಿ ಸಾರ್ವಕಾಲಿಕ ದಾಖಲೆ  ಮಾಡಿವೆ. ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 476.11 ಅಂಕಗಳ ಏರಿಕೆ  ದಾಖಲಿಸಿ ದಿನದ ಅಂತ್ಯಕ್ಕೆ ದಾಖಲೆಯ 58,723.20ಕ್ಕೆ ತಲುಪಿದೆ. ನಿಫ್ಟಿ 139.45  ಅಂಕ ಏರಿಕೆ ಕಂಡು, 17,519ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next