ಹೊಸದಿಲ್ಲಿ: ದೇಶದಲ್ಲಿ “ದುರಸ್ತಿಯ ಹಕ್ಕು’ ಜಾರಿ ಮಾಡಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ. ಈ ಕುರಿತು ಸಮಗ್ರ ನೀತಿಯನ್ನು ರೂಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಸಮಿತಿಯೊಂದನ್ನು ರಚಿಸಿದೆ.
ಇದು ಜಾರಿಯಾದರೆ ಕೃಷಿ ಉಪಕರಣಗಳು, ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು, ಆಟೋಮೊಬೈಲ್‌ಗಳು/ ಆಟೋಮೊಬೈಲ್ ಬಿಡಿಭಾಗಗಳು ಕೆಟ್ಟರೆ ಅಧಿಕೃತ ಮಾರಾಟಗಾರರು ಮತ್ತು ಸೇವಾ ಕೇಂದ್ರಗಳಲ್ಲಿಯೇ ದುರಸ್ತಿ ಮಾಡಬೇಕು ಎಂಬ ನಿಯಮವು ರದ್ದಾಗಲಿದೆ. ಗ್ರಾಹಕರು ತಮಗೆ ಬೇಕಾದ ಕಡೆ ದುರಸ್ತಿ ಮಾಡಿಸಿಕೊಳ್ಳುವ ಅಧಿಕಾರ ಪಡೆಯುತ್ತಾರೆ.
ಜತೆಗೆ ಯಾವುದೇ ಡಿವೈಸ್‌ಗಳ ಸರ್ವೀಸ್‌ಗೆ ಅಗತ್ಯವಿರುವ ಬಿಡಿಭಾಗಗಳು, ಸಲಕರಣೆಗಳು ಇನ್ನು ಮುಂದೆ ಥರ್ಡ್ ಪಾರ್ಟಿಗೂ ಲಭ್ಯವಾಗುವಂತೆ ಮಾಡುವ ನಿಯಮವೂ ಜಾರಿಯಾಗಲಿದೆ. ಆಗ ಸಣ್ಣಪುಟ್ಟ ಸಮಸ್ಯೆಯಾದಾಗ ಸ್ಥಳೀಯ ಮಟ್ಟದಲ್ಲೇ ದುರಸ್ತಿ ಮಾಡುವವರು ದುರಸ್ತಿ ಮಾಡಬಹುದು.
ಸಾಮಾನ್ಯವಾಗಿ ಉತ್ಪಾದಕ ಕಂಪೆನಿಗಳು ತಮ್ಮ ಉತ್ಪನ್ನಗಳ ಬಿಡಿಭಾಗಗಳು ಮತ್ತಿತರ ಎಲ್ಲ ವಸ್ತುಗಳ ವಿನ್ಯಾಸದ ಒಡೆತನವು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿರುವಂತೆ ನೋಡಿಕೊಳ್ಳುತ್ತವೆ. ಆದರೆ ಈ ಏಕಸ್ವಾಮ್ಯವು ಗ್ರಾಹಕರ ದುರಸ್ತಿ ಆಯ್ಕೆಯ “ಹಕ್ಕನ್ನು’ ಕಸಿದುಕೊಂಡಂತೆ ಎಂದು ಸರಕಾರ ಪ್ರತಿಪಾದಿಸಿದೆ. ಈ ಏಕಸ್ವಾಮ್ಯವನ್ನು ತಪ್ಪಿಸುವುದೇ ಸರಕಾರದ ಉದ್ದೇಶ.
ಉದ್ದೇಶವೇನು? :
– ಗ್ರಾಹಕರಿಗೆ ಹೆಚ್ಚಿನ ಅಧಿಕಾರ
– ಸಾಮಗ್ರಿಗಳ ಉತ್ಪಾದಕರು ಮತ್ತು ಥರ್ಡ್ ಪಾರ್ಟಿ ಗ್ರಾಹಕರು, ಮಾರಾಟಗಾರರ ನಡುವೆ ಉತ್ತಮ ವ್ಯಾಪಾರ ಸಂಬಂಧ ಮೂಡಿಸುವುದು
– ಇ-ತ್ಯಾಜ್ಯಗಳ ಪ್ರಮಾಣವನ್ನು ತಗ್ಗಿಸುವುದು, ಪರಿಸರಸ್ನೇಹಿ ಜೀವನಶೈಲಿಗೆ ಪ್ರೋತ್ಸಾಹ
– ಉದ್ಯೋಗಾವಕಾಶ ಸೃಷ್ಟಿ