ಚಿಕ್ಕಬಳ್ಳಾಪುರ: ಜಿಲ್ಲೆಯ ಆರೂರು ಬಳಿ ನಿರ್ಮಿಸಲಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಂದಾಜು ವೆಚ್ಚದಲ್ಲಿ ದಿಢೀರ್ ಹೆಚ್ಚಳ ಆಗಿರುವ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ತನಿಖೆಗೆ ಆದೇಶಿಸಿದ್ದು, ಇತ್ತೀಚೆಗೆ ತನಿಖಾ ತಂಡದ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿ ಪರಿಶೀಲಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಆರೂರು ಗ್ರಾಮದ ಬಳಿ ಸುಮಾರು 70 ಎಕೆರೆ ಪ್ರದೇಶದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರು ಮಾಡಿ ನಿರ್ಮಿಸಲಾಗಿತ್ತು. ಕಾಮಗಾರಿ ಅಪೂರ್ಣ ವಾಗಿದ್ದಾಗಲೇ ಚುನಾವಣೆ ಘೋಷಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು.
ವೆಚ್ಚದಲ್ಲಿ ಹೆಚ್ಚಳ: ಆರಂಭದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ನ್ನು 525 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲಾಗಿತ್ತು. ಆದರೆ, ಕಾಮಗಾರಿ ಬಹುಪಾಲು ಮುಗಿಯುವ ವೇಳೆಗೆ ಕಾಮಗಾರಿ ಯೋಜನಾ ಗಾತ್ರ 810 ಕೋಟಿಗೆ ಸರ್ಕಾರ ಏರಿಸಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ಕೂಡಲೇ ಕಾಂಗ್ರೆಸ್ ಸರ್ಕಾರ ಇದೀಗ ಯೋಜನಾ ವೆಚ್ಚದಲ್ಲಿ ದಿಢೀರ್ ಹೆಚ್ಚಳ ಆಗಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತಪಡಿಸಿ, ಹೆಚ್ಚಳ ಆಗಿರುವ 200 ಕೊಟಿ ರೂ. ಅನುದಾನದ ಮೂಲ ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಆಗಿದ್ದ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರ ಅವಧಿಯಲ್ಲಿಯೆ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಆಗಿದ್ದು, ಕಾಲೇಜ್ ಕಟ್ಟಡ ಯೋಜನಾ ವೆಚ್ಚದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಪಾರದರ್ಶಕವಾಗಿ ನಿಯಮಾನುಸಾರ ಟೆಂಡರ್ ಕರೆದಿಲ್ಲ. ಸಚಿವ ಸಂಪುಟದ ಒಪ್ಪಿಗೆ ಇಲ್ಲದೇ 525 ಕೋಟಿ ರೂ. ಇದ್ದ ಯೋಜನಾ ವೆಚ್ಚವನ್ನು 810 ಕೋಟಿಗೆ ಏರಿಸಲಾಗಿದೆಯೆಂದು ಜಿಲ್ಲೆಯ ಕಾಂಗ್ರೆಸ್ ಶಾಸಕರು ಅದರಲ್ಲೂ ಈಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಆರೋಪಿಸಿ ಸರ್ಕಾರದಿಂದ ತನಿಖೆ ನಡೆಸುವುದಾಗಿ ಆಗಾಗ ಹೇಳುತ್ತಲೇ ಇದ್ದರು.
ಕಾಲೇಜಿಗೆ ಭೇಟಿ: ಕೊನೆಗೂ ಸರ್ಕಾರ ಈಗ ಸದ್ದಿಲ್ಲದೇ ತನಿಖೆಗೆ ಆದೇಶಿಸಿದ್ದು, ಮೂರು ದಿನಗಳ ಹಿಂದೆ ಹಿರಿಯ ಎಂಜಿನಿಯರ್‌ಗಳ ತಂಡ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಕಟ್ಟಡದ ವಸ್ತು ಸ್ಥಿತಿ, ಗುಣಮಟ್ಟ, ವಿನ್ಯಾಸ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.
ಚಿಕ್ಕಬಳ್ಳಾಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಟ್ಟಡ ನಿರ್ಮಾಣದ ವೆಚ್ಚದ ಬಗ್ಗೆ 3 ದಿನಗಳ ಹಿಂದೆ ರಾಜ್ಯ ಮಟ್ಟದ ಕೆಲ ಹಿರಿಯ ಎಂಜಿನಿಯರ್‌ಗಳ ತಂಡ ಕಾಲೇಜಿಗೆ ಬೇಟಿ ನೀಡಿ ಕಾಲೇಜಿನ ವಿನ್ಯಾಸ, ಗುಣಮಟ್ಟ ಮತ್ತಿತರ ತಾಂತ್ರಿಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿ ತೆರಳಿದ್ದಾರೆ.
-ಡಾ.ಮಂಜುನಾಥ, ನಿರ್ದೇಶಕರು, ಸರ್ಕಾರಿ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರ.
– ಕಾಗತಿ ನಾಗರಾಜಪ್ಪ