Advertisement

Joint Session; ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದ ಸರಕಾರ: ವಿಪಕ್ಷ ಟೀಕೆ

12:27 AM Feb 13, 2024 | Team Udayavani |

ಬೆಂಗಳೂರು: ರಾಜ್ಯಪಾಲರ ಭಾಷಣದ ಮೂಲಕ ರಾಜ್ಯ ಸರಕಾರ ಸುಳ್ಳು ಹೇಳಿಸಿದೆ ಎಂದು ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಕಿಡಿ ಕಾರಿದ್ದು, ಉಪ್ಪು-ಹುಳಿ-ಖಾರ ಏನೂ ಇಲ್ಲದ ಸಪ್ಪೆ ಭಾಷಣ ಎಂದು ಟೀಕಿಸಿವೆ.

Advertisement

ಸೋಮವಾರ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತಿತರ ನಾಯಕರು ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನನ್ನ ರಾಜಕೀಯ ಅನುಭವದಲ್ಲಿ ಇಷ್ಟು ಸಪ್ಪೆ, ನಿರಾಸೆಯ ಹಾಗೂ ಭವಿಷ್ಯದ ದಿಕ್ಕು-ದೆಸೆಯಿಲ್ಲದ ರಾಜ್ಯಪಾಲರ ಭಾಷಣ ನೋಡಿರಲಿಲ್ಲ. 9 ತಿಂಗಳುಗಳಿಂದ ಅಭಿವೃದ್ಧಿ ಶೂನ್ಯ, ಜನವಿರೋಧಿ ಸರಕಾರ ಇದೆ ಎಂಬುದು ಗೊತ್ತಿದೆ. ರಾಜ್ಯಪಾಲರ ಬಾಯಿಂದ ಬಹಳಷ್ಟು ಹಸಿ ಸುಳ್ಳು ಹೇಳಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯಪಾಲರ ಭಾಷಣ ಅತ್ಯಂತ ನೀರಸವಾಗಿದ್ದು, ಸುಳ್ಳುಗಳ ಕಂತೆಯನ್ನೇ ತುರುಕಲಾಗಿದೆ. ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ಯಾರಂಟಿ ಸುತ್ತ ಗಿರಕಿ ಹೊಡೆಯುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎನ್ನುವುದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಕೆಟ್ಟ ಪರಂಪರೆಗೆ ನಾಂದಿ: ಸಿ.ಟಿ.ರವಿ
ಬೆಂಗಳೂರು: ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಮುನ್ಸೂಚಿಯಾಗಬೇಕಾಗಿದ್ದ ಭಾಷಣವನ್ನು ದೇಶವನ್ನು ಮತ್ತೂಮ್ಮೆ ವಿಭಜಿಸುವ ಕಾಂಗ್ರೆಸ್ಸಿನ ಒಳ ಹುನ್ನಾರದ ಭಾಗವನ್ನಾಗಿ ಮಾಡಿರುವುದು ದುರಂತ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಐದು ಗ್ಯಾರಂಟಿಯಲ್ಲಿ ನಾಲ್ಕನ್ನು ಅರೆಬರೆಯಾಗಿ ಜಾರಿಗೆ ತಂದ ಈ ಸರಕಾರಕ್ಕೆ ನಾಚಿಕೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸಗಳನ್ನು ಮುಚ್ಚಿಟ್ಟು, ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ರಾಜ್ಯಪಾಲರ ಬಾಯಲ್ಲಿ ಹೇಳಿಸುವ ಕೆಟ್ಟ ಪರಂಪರೆಗೆ ನಾಂದಿ ಹಾಕಿದೆ ಎಂದು ಟೀಕಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next