ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿ ಮತ್ತು ಅನಂತರದ ಬೆಳವಣಿಗೆಗಳನ್ನು ಅನುಸರಿಸಿ ದೊರಕಿರುವ ಗುಪ್ತಚರ ಮಾಹಿತಿಗಳ ಪ್ರಕಾರ ಸರಕಾರ ಇಂದು ಶನಿವಾರ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮತ್ತು ಈ ವರೆಗಿನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಆದೇಶಿಸಿದೆ.
ಪೌರ ವಾಯುಯಾನ ಭದ್ರತಾ ದಳ ಈ ಸಂಬಂಧದ ಆದೇಶವನ್ನು ಎಲ್ಲ ರಾಜ್ಯಗಳ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೀಡಿದೆಯಲ್ಲದೆ ದೇಶದಲ್ಲಿನ ಎಲ್ಲ ವಿಮಾನ ಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ, ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳಿಗೆ ಕೂಡ ನೀಡಿದೆ ಎಂದು ತಿಳಿದು ಬಂದಿದೆ.
ವಿಮಾನ ಪ್ರಯಾಣಿಕರು ವಿಮಾನ ಏರುವ ಮುನ್ನ ಶೇ.100ರಷ್ಟು ತಪಾಸಣೆಗೆ ಗುರಿಪಡಿಸಬೇಕು; ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ವರೆಗೆ ಬರುವ ಸಂದರ್ಶಕರು ಮತ್ತು ಸಿಬಂದಿಗಳನ್ನು ಕೂಡ ಕೂಲಂಕಷವಾಗಿ ತಪಾಸಿಸಬೇಕು ಎಂದು ಬಿಸಿಎಎಸ್ ಆದೇಶಿಸಿದೆ.
ಟರ್ಮಿನಲ್ ಬಿಲ್ಡಿಂಗ್ ಎದುರು ಭಾಗದಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡಲು ಬಿಡಕೂಡದು; ಕಾರ್ ಪಾರ್ಕಿಂಗ್ ಪ್ರವೇಶಿಸುವ ಎಲ್ಲ ವಾಹನಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಬೇಕು ಎಂದು ಕಟ್ಟೆಚ್ಚರ ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಎಲ್ಲ ತಪಾಸಣೆಯಲ್ಲಿ ಬಾಂಬ್ ಶೋಧ ಮತ್ತು ವಿಲೇವಾರಿ ದಳವನ್ನು ಮತ್ತು ಶ್ವಾನಗಳನ್ನು ಬಳಸಬೇಕು ಎಂದೂ ಕಟ್ಟೆಚ್ಚರ ನೊಟೀಸಿನಲ್ಲಿ ಸೂಚಿಸಲಾಗಿದೆ.