ಬೆಂಗಳೂರು: ಐಎಂಎ ವಂಚನೆ ಪ್ರಕರಣ ಪಾರದರ್ಶಕತೆ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ವಿಡಿಯೋ ಗಮನಿಸಿದರೆ ಮೇಲ್ನೋಟಕ್ಕೆ ಪ್ರಕರಣದಲ್ಲಿ ಸರ್ಕಾರ ಶಾಮೀಲಾಗಿರುವ ಶಂಕೆಯಿದೆ ಎಂದು ಗಂಭೀರ ಆರೋಪ ಮಾಡಿದರು.
ಸರ್ಕಾರದ ಸಹಕಾರದಲ್ಲಿ ವಂಚನೆ ನಡೆದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ, ಸಿಬಿಐ ತನಿಖೆಯೇ ಸೂಕ್ತ ಎಂದರು. ಐಎಂಎ ಸಂಸ್ಥೆಯ ಮಾಲೀಕ ಮನ್ಸೂನ್ ಖಾನ್‌ನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆದರೆ, ಅವರ ಪಾರ್ಸ್‌ಪೋರ್ಸ್ ವಶಕ್ಕೆ ಪಡೆದುಕೊಂಡಿರಲಿಲ್ಲ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದು ಸಾಕ್ಷ್ಯಗಳನ್ನು ನಾಶ ಪಡಿಸುವ ಉದ್ದೇಶವಾಗಿದೆ ಎಂದು ದೂರಿದರು.
ಜನರನ್ನು ಹೂಡಿಕೆದಾರರನ್ನಾಗಿ ಮಾಡದೆ ಸಂಸ್ಥೆಯ ಷೇರುದಾರರನ್ನಾಗಿ ಮಾಡಿಕೊಂಡಿದೆ ಎಂದು ಸರ್ಕಾರ ಹೇಳಿದೆ. ಆದರೆ, ಐಎಂಎ ಜನರನ್ನು ಹೂಡಿಕೆದಾರರನ್ನಾಗಿ ಮಾಡಿಕೊಂಡಿದೆಯೇ ಹೊರತು ಷೇರುದಾರರನ್ನಾಗಿ ಮಾಡಿಕೊಂಡಿಲ್ಲ. ಜನರ ದಿಕ್ಕು ತಪ್ಪಿಸುವ ಉದ್ದೇಶದಿಂದ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು. ಮನ್ಸೂರ್ ಖಾನ್ ಮಾತನಾಡಿರುವ ವಿಡಿಯೋ ಕುರಿತು ಕೂಲಂಕಷ ತನಿಖೆ ನಡೆಸಬೇಕಿರುವ ಕಾರಣ ಸರ್ಕಾರ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು.
ಪ್ರತಿಪಕ್ಷದ ಒತ್ತಡಕ್ಕೆ ಮಣಿಯದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆಯೂ ಚಿಂತನೆ ನಡೆಸಲಾಗುವುದು ಎಂದು ಹೇಳಿದರು. ದಿವಾಳಿ ಹಂತಕ್ಕೆ ಬಂದಿರುವ ಕಂಪನಿಯನ್ನು ಉಳಿಸಲಾಗದೆ ದೇಶಬಿಟ್ಟು ಪರಾರಿಯಾಗಿರುವ ಮನ್ಸೂರ್ ಖಾನ್ ಸಾವಿರಾರು ಹೂಡಿಕೆದಾರರನ್ನು ಅತಂತ್ರ ಸ್ಥಿತಿಗೆ ತಂದಿದ್ದಾರೆ.
ಹಲವು ವರ್ಷಗಳಿಂದ ನಡೆಯುತ್ತಿರುವ ವಹಿವಾಟಿನ ದಿವಾಳಿತನದ ಬಗ್ಗೆ ಕಳೆದ ವರ್ಷವೇ ತಿಳಿದಿದ್ದರೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಈ ಕುರಿತು ಮೌನ ವಹಿಸಿದೆ. ಕಂಪನಿಯನ್ನು ಉಳಿಸುವ ನಿಟ್ಟಿನಲ್ಲಿ ಎನ್‌ಬಿಎಫ್ಸಿಯಿಂದ ನಿರಾಕ್ಷೇಪಣಾ ಪತ್ರಕ್ಕಾಗಿ (ಎನ್‌ಒಸಿ) ಐಎಎಸ್ ಅಧಿಕಾರಿಯೊಬ್ಬರಿಗೆ ಲಂಚ ನೀಡಲು ಸಾಧ್ಯವಾಗದಿರುವುದು ಸೇರಿದಂತೆ ಕೆಲವು ರಾಜಕಾರಣಿಗಳ ಹೆಸರು ವಿಡಿಯೋದಲ್ಲಿ ಪ್ರಸ್ತಾಪವಾಗಿದೆ.
ಈ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದಿಂದ ನಿಷ್ಪಕ್ಷಪಾತದಿಂದ ತನಿಖೆಯಾಗುವ ಬಗ್ಗೆ ಸಂಶಯ ಇದೆ ಎಂದು ತಿಳಿಸಿದರು. ಅಲ್ಪಸಂಖ್ಯಾತರನ್ನು ಮತ ಬ್ಯಾಂಕ್ ರೀತಿಯಲ್ಲಿ ನೋಡುತ್ತಿರುವ ಸಮ್ಮಿಶ್ರ ಸರ್ಕಾರಕ್ಕೆ ಅಲ್ಪಸಂಖ್ಯಾತರ ನೋವು ಕೇಳಿಸುತ್ತಿಲ್ಲ. ಪ್ರಭಾವಿ ವ್ಯಕ್ತಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.