Advertisement

ಕಾಲುವೆ ಆಧುನೀಕರಣಕ್ಕೆ ಸರ್ಕಾರ ಅಸ್ತು

06:43 PM Nov 16, 2020 | Suhan S |

ಮಸ್ಕಿ: ಮಸ್ಕಿ ಕ್ಷೇತ್ರದ ಹಲವು ಹಳ್ಳಿಗಳಿಗೆ ನೀರಾವರಿ ಭಾಗ್ಯ ಕಲ್ಪಿಸಿದ ಮಸ್ಕಿ ನಾಲಾ ಜಲಾಶಯ (ಎಂಎನ್‌ ಪಿ)ದ ಎಡ, ಬಲ ದಂಡೆಗಳ ಕಾಲುವೆ ಆಧುನೀಕರಣಕ್ಕೆ ಕೊನೆಗೂ ಸರಕಾರ ಒಪ್ಪಿಗೆ ನೀಡಿದ್ದು, 52.54 ಕೋಟಿ ರೂ. ಬಿಡುಗಡೆ ಮಾಡಿದೆ.

Advertisement

ಹಲವು ದಶಕದಿಂದಲೂ ಇದ್ದ ಈ ಬೇಡಿಕೆಗೆ ಈ ಬಾರಿ ಸ್ಪಂದನೆ ಸಿಕ್ಕಿದೆ. ಯೋಜನೆಯ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಿ ಎರಡ್ಮೂರು ಬಾರಿ ಆರ್ಥಿಕ ಇಲಾಖೆಗೆ ಅನುಮೋದನೆ ಸಲ್ಲಿಸಿದರೂ ತಿರಸ್ಕಾರಗೊಂಡಿತ್ತು. ಆದರೆ ಈ ಬಾರಿ ಮಸ್ಕಿ ಉಪ ಚುನಾವಣೆ ಹೊತ್ತಲ್ಲೇ ಬಹು ದೊಡ್ಡ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು, ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಸಂತಸ ತಂದಿದೆ.

ಏನಿದು ಯೋಜನೆ?: ಮಳೆಗಾಲದಲ್ಲಿ ಮಸ್ಕಿ ಹಿರೇಹಳ್ಳಕ್ಕೆ ಹೆಚ್ಚುವರಿಯಾಗಿ ಹರಿಯುವ ನೀರನ್ನು ಮಾರಲದಿನ್ನಿ ಬಳಿ ಸಂಗ್ರಹಿಸಲು ಜಲಾಶಯ ನಿರ್ಮಿಸಲಾಗಿದೆ. 0.2 ಟಿಎಂಸಿ ಸಾಮರ್ಥ್ಯದ ಜಲಾಶಯದಿಂದ ಎಡ ಮತ್ತು ಬಲದಂಡೆ ಕಾಲುವೆಗಳ ಮೂಲಕ ಎರಡು ಬೆಳೆಗೆ ನೀರು ಕಲ್ಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಮಸ್ಕಿ ಕ್ಷೇತ್ರದ ಸುಮಾರು 10 ಹಳ್ಳಿಗಳ 3ಸಾವಿರ ಹೆಕ್ಟೇರ್‌(7416 ಎಕರೆ) ಪ್ರದೇಶಕ್ಕೆ ನೀರೊದಗಿಸಲಾಗುತ್ತದೆ. ಆದರೆ ಹಲವು ದಶಕಗಳಿಂದ ಆಧುನೀಕರಣಗೊಳ್ಳದೇ ಇದ್ದ ಇಲ್ಲಿನ ಕಾಲುವೆಗಳು ಎಲ್ಲೆಂದರಲ್ಲಿ ಬಿರುಕು ಬಿಟ್ಟಿದ್ದವು. ಸಿಮೆಂಟ್‌ ಗೋಡೆಗಳು ಕಚಳಿ ನೀರು ಪೋಲಾಗುತ್ತಿತ್ತು. ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ಕೆಳಭಾಗದ ರೈತರಿಗೆ ನೀರು ಸಿಗದೆ ಪರದಾಡುವ ಸನ್ನಿವೇಶ ಸೃಷ್ಟಿಯಾಗಿತ್ತು.

52.54 ಕೋಟಿ ರೂ.: ಮಸ್ಕಿ ನಾಲಾ ಜಲಾಶಯದ ಎಡದಂಡೆ ನಾಲೆ 10 ಕಿಮೀ, ಬಲದಂಡೆ ನಾಲೆ 11.5 ಕಿಮೀ ಕಾಲುವೆಗಳನ್ನು ಆಧುನೀಕರಣಗೊಳಿಸಲು ಹಲವು ವರ್ಷಗಳಿಂದಲೇ ಯೋಜನೆ ರೂಪಿಸಲಾಗಿತ್ತು. ಆದರೆ ಅನುದಾನ ಪ್ರಾಪ್ತಿಯಾಗಿರಲಿಲ್ಲ. ಇದಕ್ಕಾಗಿ 52.54 ಕೋಟಿ ರೂ. ಅಂದಾಜು ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಎರಡು ದಿನಗಳ ಹಿಂದೆಯಷ್ಟೇ ಯಡಿಯೂರಪ್ಪ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದೆ. ಉಪ ಚುನಾವಣೆ ಘೋಷಣೆ ಹೊತ್ತಲ್ಲೇ ಈ ಅನುದಾನ ಬಿಡುಗಡೆಯಾಗಿದ್ದು, ಗಮನಾರ್ಹ ಸಂಗತಿ.

ಟೆಂಡರ್‌ ಬಾಕಿ: ಎಂಎನ್‌ಪಿ ಎಡ, ಬಲದಂಡೆ ನಾಲೆಗಳ ಕಾಲುವೆಗಳ ಆಧುನೀಕರಣಕ್ಕೆ ನಿಗ  ದಿಪಡಿಸಿದ್ದ ಅಂದಾಜು 52.54 ಕೋಟಿ ರೂ. ಅನುದಾನವೇನೂ ಪ್ರಾಪ್ತಿಯಾಗಿದೆ. ಸದ್ಯ ಆಡಳಿತಾತ್ಮಕ, ಆರ್ಥಿಕ ಅನುಮೋದನೆ ಸಿಕ್ಕಿದೆ. ಈಗ ಟೆಂಡರ್‌ ಕರೆಯುವುದೊಂದು ಬಾಕಿ ಇದ್ದು, ಎರಡನೇ ಬೆಳೆ ವೇಳೆಗೆ ಟೆಂಡರ್‌ ಕರೆದು ಕೆಲಸ ಆರಂಭವಾದರೆ ಸಾಕು ಎನ್ನುತ್ತರೆ ಅಚ್ಚುಕಟ್ಟು ಭಾಗದ ರೈತರು.

Advertisement

ಹಲವು ದಿನಗಳ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಈ ಹಿಂದೆಯೇ ಎಂಎನ್‌ಪಿ ಕಾಲುವೆಗಳ ಆಧುನೀಕರಣಕ್ಕೆ ಅನುದಾನ ಕೇಳಿದ್ದೇವು. ಆದರೆ ಬಜೆಟ್‌ ಕೊರತೆ ಕಾರಣ ಅನುದಾನ ಸಿಕ್ಕಿರಲಿಲ್ಲ. ಈಗ ಸರಕಾರ ಅನುದಾನ ನೀಡಿದ್ದು, ಕ್ಷೇತ್ರದ ಪರವಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. – ಪ್ರತಾಪಗೌಡ ಪಾಟೀಲ್‌ ಮಾಜಿ ಶಾಸಕರು.

ಎಂಎನ್‌ಪಿ ಕಾಲುವೆಗಳ ಆಧುನೀಕರಣಕ್ಕೆ ಅನುದಾನ ಬೇಕು ಎಂದು ಮೊದಲಿಂದಲೂ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಈಗ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. – ದಾವೂದ್‌, ಎಇಇ, ಎಂಎನ್‌ಪಿ ಮಸ್ಕಿ

 

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next