Advertisement

ಥಿಯೇಟರ್‌ ಬಾಗಿಲು ಇಂದಿನಿಂದ ತೆರೆಯಲಿದೆ: 50% ಪ್ರೇಕ್ಷಕರಿಗಷ್ಟೇ ಅನುಮತಿ

09:09 AM Jul 19, 2021 | Team Udayavani |

ಕೋವಿಡ್‌ ಎರಡನೇ ಲಾಕ್‌ಡೌನ್‌ನ ನಿಯಮಗಳನ್ನು ನಿಧಾನವಾಗಿ ಸಡಿಲಿಸುತ್ತಿರುವ ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಈ ಕುರಿತು ಭಾನುವಾರ (ಜು.18) ಅನ್‌ಲಾಕ್‌ ಮಾರ್ಗಸೂಚಿಸಿ ಬಿಡುಗಡೆಗೊಳಿಸಿರುವ ರಾಜ್ಯ ಸರ್ಕಾರ, ಕೇವಲ 50% ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಸೇರಿದಂತೆ, ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ಥಿಯೇಟರ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಿದೆ. ಈ ನಿಯಮಾವಳಿಗಳು ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ ಮತ್ತು ಮಲ್ಟಿಫ್ಲೆಕ್ಸ್‌ಗಳಿಗೂ ಅನ್ವಯವಾಗಲಿದ್ದು, ಇಂದಿನಿಂದಲೇ (ಜು.19) ರಾಜ್ಯದಾದ್ಯಂತ ಜಾರಿಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Advertisement

ಇನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಥಿಯೇಟರ್‌ಗಳಲ್ಲಿ50% ರಷ್ಟು ಮಾತ್ರ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರೇಕ್ಷಕರಿಗೆ ಮಾಸ್ಕ್ಧರಿಸುವುದುಕಡ್ಡಾಯಗೊಳಿಸಲಾಗಿದೆ. ಜೊತೆಗೆ ಥಿಯೇಟರ್‌ಗಳಲ್ಲಿ ಸಿನಿಮಾಗಳ ಪ್ರದರ್ಶನ ನಡುವೆ ಸ್ಯಾನಿಟೈಸೇಶನ್‌ ಮಾಡುವ ಮೂಲಕ ಸ್ವತ್ಛತೆ ಕಾಪಾಡಿಕೊಳ್ಳಬೇಕು, ಅನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಲು ತಿಳಿಸಲಾಗಿದ್ದು, ಟಿಕೆಟ್‌ಕೌಂಟರ್‌ ಮತ್ತಿತರ ಸ್ಥಳಗಳಲ್ಲಿ ಜನಜಂಗುಳಿ ಸೇರದಂತೆ ನೋಡಿಕೊಳ್ಳುವಂತೆಯೂ ಸೂಚಿಸಲಾಗಿದೆ.

ಜೂನ್‌ ಕೊನೆಯ ವಾರದಿಂದ ಅನ್‌ಲಾಕ್‌ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಸರ್ಕಾರ ಸಿನಿಮಾಗಳ ಒಳಾಂಗಣ ಚಿತ್ರೀಕರಣ ಮತ್ತಿತರ ಕೆಲಸಗಳಿಗೆ ಅನುಮತಿ ನೀಡಿದೆ. ಈಗಾಗಲೇ ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಥಿಯೇಟರ್‌ಗಳನ್ನು ತೆರೆಯಲು ಅಲ್ಲಿನ ರಾಜ್ಯ ಸರ್ಕಾರಗಳು ಅನುಮತಿ ನೀಡಿದ್ದು, ರಾಜ್ಯದಲ್ಲಿಯೂ ಥಿಯೇಟರ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ಚಿತ್ರರಂಗ ಇತ್ತೀಚೆಗೆ ಸರ್ಕಾರಕ್ಕೆ ಮನವಿ ಮಾಡಿತ್ತು. ಅದರಂತೆ ಈಗಕರ್ನಾಟಕದಲ್ಲೂ ಥಿಯೇಟರ್‌ಗಳಲ್ಲೂ ತೆರೆಯಲು ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಮುಖದಲ್ಲಿ ಕೊಂಚ ಮಟ್ಟಿಗೆ ನಗು ಮೂಡುತಿ

ಕೋವಿಡ್‌ ಎರಡನೇ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಇದೇ ಏಪ್ರಿಲ್‌ 20 ರಿಂದ ರಾಜ್ಯದ ಎಲ್ಲ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಅದಾದ ಬಳಿಕ ಸರಿಸುಮಾರು ಮೂರು ತಿಂಗಳ ನಂತರ ಮತ್ತೆ ಥಿಯೇಟರ್‌ಗಳ ಬಾಗಿಲು ಇಂದಿನಿಂದ ತೆರೆಯುತ್ತಿವೆ. ಥಿಯೇಟರ್‌ಗಳನ್ನು ತೆರೆಯುವ ಅನುಮತಿ ಹೊರ ಬೀಳುತ್ತಿದ್ದಂತೆ, ಬೆಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಮಂಡ್ಯ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಥಿಯೇಟರ್‌ಗಳಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಥಿಯೇಟರ್‌ ಮಾಲೀಕರು ಮತ್ತು ಸಿಬ್ಬಂದಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಥಿಯೇಟರ್‌ಗಳಲ್ಲಿ ಸಣ್ಣಪುಟ್ಟ ರಿಪೇರಿ, ಒಳಾಂಗಣ ಸ್ವತ್ಛತೆ, ಮತ್ತಿತರ ತಯಾರಿಗಳಿಗಾಗಿ ಇನ್ನು ಎರಡು-ಮೂರು ದಿನಗಳು ಬೇಕಾಗಿದೆ. ಹಾಗಾಗಿ ಈಗಾಗಲೇ ಸಿದ್ಧವಾಗಿರುವಕೆಲವು ಥಿಯೇಟರ್‌ಗಳಲ್ಲಿ ಇಂದಿನಿಂದ ಸಿನಿಮಾಗಳು ಪ್ರದರ್ಶನವಾದರೆ, ಉಳಿದಂತೆ ರಾಜ್ಯದ ಬಹುತೇಕ ಥಿಯೇಟರ್‌ಗಳಲ್ಲಿ, ಈ ವಾರಾಂತ್ಯದಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಥಿಯೇಟರ್‌ಗಳ ಮಾಲೀಕರು ನಿರ್ಧರಿಸಿದ್ದಾರೆ

Advertisement

ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌ ಶೀಘ್ರ?

ಇನ್ನು ರಾಜ್ಯದಲ್ಲಿ ಇಂದಿನಿಂದ ಥಿಯೇಟರ್‌ ತೆರೆದರೂ ತಕ್ಷಣಕ್ಕೆಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈ ಹಿಂದೆ ಲಾಕ್‌ಡೌನ್‌ ಆಗುವುದಕ್ಕೂ ಮೊದಲು ಪ್ರದರ್ಶನವಾಗುತ್ತಿದ್ದ ಸಿನಿಮಾಗಳು ಮತ್ತೆ ತೆರೆಗೆ ಬರಲಿವೆ ಎನ್ನಲಾಗುತ್ತಿದೆ. ಈಗ 50% ಪ್ರೇಕ್ಷಕರ ಪ್ರವೇಶಾವಕಾಶಕ್ಕೆ ಅನುಮತಿ ಸಿಕ್ಕಿರುವುದರಿಂದ, ಸದ್ಯ ಪ್ರೇಕ್ಷಕರಿಂದ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ತಮ್ಮ ಸಿನಿಮಾಗಳ ಬಿಡುಗಡೆಯ ದಿನಾಂಕ ನಿಶ್ಚಯಿಸಲು ರಿಲೀಸ್‌ಗೆ ರೆಡಿಯಿರುವ ಬಿಗ್‌ ಬಜೆಟ್‌ ಸಿನಿಮಾಗಳ ನಿರ್ಮಾಪಕರು ನಿರ್ಧರಿಸಿದ್ದಾರೆ. ಆದರೆ, ಯಾವುದೇ ಸಿನಿಮಾಗಳು ಬಿಡುಗಡೆಯಾಗ ಬೇಕಾದರೆ ಕನಿಷ್ಟ ಎರಡು ವಾರಗಳ ತಯಾರಿ ಬೇಕಾಗಿರುವುದರಿಂದ, ಈ ವಾರಾಂತ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಸಿನಿಮಾಗಳು ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸುತ್ತಾರೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷಕೆ. ವಿ ಚಂದ್ರಶೇಖರ್.

ಕೆಲ ದಿನಗಳ ಹಿಂದಷ್ಟೇ ಥಿಯೇಟರ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆವು. ಅದರಂತೆ ನಮ್ಮ ಮನವಿಗೆ ಸ್ಪಂದಿಸಿರುವ ಸರ್ಕಾರ ಸದ್ಯಕ್ಕೆ 50% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡಿದೆ. ಥಿಯೇಟರ್‌ ತೆರೆಯಲು ಅನುಮತಿ ಕೊಟ್ಟಿರುವುದಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಆದಷ್ಟು ಬೇಗ 100%ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡುವಂತಾಗಲಿ. ಪೂರ್ಣ ಪ್ರಮಾಣದಲ್ಲಿ ಪ್ರವೇಶಾವಕಾಶ ಕೊಟ್ಟರೆ ಮಾತ್ರ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಮಾಡೋದಕ್ಕೆ ಸಾಧ್ಯ. ಹಾಗಾಗಿ ಈ ಬಗ್ಗೆ ಶೀಘ್ರದಲ್ಲಿಯೇ ಚರ್ಚಿಸಿ ಮತ್ತೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ.

ಡಿ.ಆರ್‌ ಜೈರಾಜ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ

 

ಸರ್ಕಾರ ಇಂದಿನಿಂದಲೇ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ಕೊಡುತ್ತದೆ ಎಂಬ ನಿರೀಕ್ಷೆ ನಮಗಿರಲಿಲ್ಲ. ಹೀಗಾಗಿ ಥಿಯೇಟರ್‌ಗಳಲ್ಲಿ ತಕ್ಷಣ ಸಿನಿಮಾಗಳ ಪ್ರದರ್ಶನಕ್ಕೆಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಅದು ಕೂಡ ಮಳೆಗಾಲವಾಗಿದ್ದರಿಂದ ಥಿಯೇಟರ್‌ಗಳಲ್ಲಿ ಒಂದಷ್ಟು ದುರಸ್ಥಿ, ಮತ್ತಿತರ ಸಣ್ಣ ಪುಟ್ಟಕೆಲಸಗಳಿಗೆಕೆಲ ದಿನ ಬೇಕಾಗುತ್ತದೆ. ತಕ್ಷಣಕ್ಕೆ ಥಿಯೇಟರ್‌ ಗಳು ಓಪನ್‌ ಆದರೂ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧರಿರುವುದಿಲ್ಲ. ಹಾಗಾಗಿ ಕನಿಷ್ಟ ಒಂದೆರಡು ವಾರಗಳ ಬಳಿಕವಷ್ಟೇ ಎಲ್ಲ ಥಿಯೇಟರ್‌ಗಳಲ್ಲೂ ಸಿನಿಮಾಗಳ ಪ್ರದರ್ಶನ ಶುರುವಾಗಬಹುದು.

ಕೆ.ವಿ ಚಂದ್ರಶೇಖರ್‌, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

 

ನಮ್ಮದು ಬಿಗ್‌ ಬಜೆಟ್‌ ಸಿನಿಮಾವಾಗಿದ್ದರಿಂದ ಈಗಿನ ಮಟ್ಟಿಗಿರುವ 50% ಪ್ರೇಕ್ಷಕರ ಪ್ರವೇಶಾತಿಯಲ್ಲಿ ಸಿನಿಮಾ ರಿಲೀಸ್‌ ಮಾಡೋದಕ್ಕೆ ಕಷ್ಟ. ಹಾಗಾಗಿ 100% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗುವವರೆಗೂ ಕಾಯುವ ನಿರ್ಧಾರಕ್ಕೆ ಬಂದಿದ್ದೇವೆ. ಥಿಯೇಟರ್‌ಗಳಲ್ಲಿ 100% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಸಿಗುತ್ತಿದ್ದಂತೆ, ನಮ್ಮ ಸಿನಿಮಾ ರಿಲೀಸ್‌ ಆಗುತ್ತದೆ.

 ಕೆ.ಪಿ ಶ್ರೀಕಾಂತ್‌, “ಸಲಗ’ ಚಿತ್ರದ ನಿರ್ಮಾಪಕ

Advertisement

Udayavani is now on Telegram. Click here to join our channel and stay updated with the latest news.

Next