ಬೆಳ್ತಂಗಡಿ: ಕೋವಿಡ್ ಆಂತರಿಕ ಭಯದ ನಡುವೆ ಸರಕಾರ ಕೃಷಿ ಭೂಮಿ ಖರೀದಿ ತಿದ್ದುಪಡಿ ತರಲು ಮುಂದಾಗಿದೆ. ಇದು ಕಾಂಗ್ರೆಸ್ ಸರಕಾರ ತಂದ ಭೂಸುಧಾರಣೆ ಕಾಯ್ದೆಯನ್ನು ಸಂಪೂರ್ಣ ನಾಶಮಾಡಲಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಅವರು ಮಂಜುನಾಥ ಸ್ವಾಮಿ ದರ್ಶನ ಪಡೆದು, ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಕಾರ್ಯಾಧ್ಯಕ್ಷರನ್ನಾಗಿ ನನ್ನನ್ನು ಎರಡನೇ ಬಾರಿಗೆ ಆಯ್ಕೆ ಮಾಡಿದ್ದಾರೆ. ಪ್ರತಿಜ್ಞಾ ದಿನದಂದು ಸಂವಿಧಾನ ಪೀಠಿಕೆ ಓದುವ ಮೂಲಕ ಪಕ್ಷ ಹೊಸ ಭಾಷ್ಯ ಬರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊರೊನಾ ತಡೆಗಟ್ಟುವಲ್ಲಿ ಸರಕಾರಕ್ಕೆ ಸಲಹೆ ಸೂಚನೆ ಬೆಂಬಲ ಕೊಟ್ಟಿದ್ದೇವೆ. ಆದರೆ ನಮ್ಮ ಸೂಚನೆಯನ್ನು ಸರಕಾರ ಯಾವುದೇ ರೀತಿಯಲ್ಲೂ ಅನುಷ್ಠಾನ ಮಾಡಿಲ್ಲ. ಕೊರೊನಾ ವಾರಿಯರ್ಸ್‌ಗೆ ನೀಡಿದ ಸುರಕ್ಷಾ ಕಿಟ್ ಕಳಪೆ ಗುಣಮಟ್ಟ ದ್ದಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಬಾರಿ ರಾಜ್ಯದಲ್ಲಿ 8.50 ಲಕ್ಷ ಮಂದಿ ಎಸೆಸೆಲ್ಸಿ ಪರೀಕ್ಷೆ ಎದುರಿಸಲಿದ್ದಾರೆ. ಸರಕಾರ ವಿದ್ಯಾರ್ಥಿಗಳ ರಕ್ಷಣೆಗೆ ಗಂಭೀರವಾಗಿ ಚಿಂತಿಸಿ ಪೂರ್ವಸಿದ್ಧತೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಎಲ್‌ಸಿ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.