ಬೆಂಗಳೂರು: ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿರುವುದು ಹಾಗೂ ಕೆಂಪೇಗೌಡ ಜಯಂತಿ ಆಚರಣೆ ಘೋಷಣೆ ಮಾಡಿರುವುದು ಸೇರಿ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕರು ಬರೀ ಸುಳ್ಳು ಹೇಳುವುದರಲ್ಲೇ ನಿರತರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಕುರಿತು ಈಗಾಗಲೇ ನಡೆದಿರುವ ಕಾರ್ಯಗಳ ಕುರಿತಂತೆ ಬಿಜೆಪಿ ಸರ್ಕಾರ ಬರೀ ಸುಳ್ಳು ಹೇಳುವುದರಲ್ಲೇ ಕಾಲ ಕಳೆಯುತ್ತಿದೆ ಎಂದು ತಿರುಗೇಟು ನೀಡಿದರು.
2013ರ ಡಿಸೆಂಬರ್ 14ರಂದು ನಮ್ಮ ಸರ್ಕಾರ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಹೆಸರಿಸಿದೆ. ಜತೆಗೆ ಕೆಂಪೇಗೌಡ ಪ್ರಾಧಿಕಾರ ಕೂಡ ರಚನೆ ಮಾಡಿದೆ. ಆದರೆ ಬಿಜೆಪಿ ಜನತೆಯ ಮುಂದೆ ಈ ವಿಚಾರದಲ್ಲಿ ಬರೀ ಸುಳ್ಳುಗಳನ್ನು ಹೇಳುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ನಾಡಪ್ರಭು ಕೆಂಪೇಗೌಡ ಅವರ ಜಯಂತಿ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕೆರೆಕುಂಟೆ ನಿರ್ಮಿಸುವುದರ ಜತೆ ಪಾರ್ಕ್‌ಗಳನ್ನು ಕೂಡ ನಿರ್ಮಾಣ ಮಾಡಿ ಬೆಂಗಳೂರಿನ ಅಭಿವೃದ್ಧಿಗೆ ಕಾರಣರಾದರು. ಆ ಹಿನ್ನೆಲೆಯಲ್ಲಿ ಐತಿಹಾಸ ಪುರುಷ ಕೆಂಪೇಗೌಡರ ಹೆಸರನ್ನು ಚಿರಸ್ಥಾಯಿ ಆಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಿತು. ಈ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏಕೆ ಮಾಡಲಿಲ್ಲ ಕುಟುಕಿದರು.
ಈ ಹಿಂದೆ ಆ ವಿಮಾನ ನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಹೆಸರಿಡಬೇಕಾ, ಅಂಬೇಡ್ಕರ್ ಹೆಸರಿಡಬೇಕಾ, ಕೆಂಪೇಗೌಡ ಹೆಸರಿಡಬೇಕಾ ಎಂದು ಕೇಂದ್ರ ಸರ್ಕಾರ ಕೇಳಿತ್ತು. ಆಗ ಕೆಂಪೇಗೌಡ ಅವರ ಹೆಸರನ್ನೇ ಇರಿಸಬೇಕು ಎಂದು ನಮ್ಮ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು ಎಂದು ತಿಳಿಸಿದರು.
ಆಹ್ವಾನ ಪತ್ರಿಕೆಯಲ್ಲಿ ಹೆಸರಿರಲಿಲ್ಲ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡ ಅವರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಫೋನ್ ಮಾಡಿ ಆಹ್ವಾನ ನೀಡಿದ್ದರು. ಆದರೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಇಲ್ಲದ ಹಿನ್ನೆಲೆಯಲ್ಲಿ ನಾನು ಆ ಕಾರ್ಯಕ್ರಮಕ್ಕೆ ಬರಲ್ಲ ಎಂದು ಅವರಿಗೆ ಹೇಳಿದ್ದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.