ಹೊಸದಿಲ್ಲಿ: ಭ್ರಷ್ಟ ಹಾಗೂ ಅದಕ್ಷ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಕೇಂದ್ರ ಸರಕಾರ ಈಗ ಬ್ಯಾಂಕುಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಎಲ್ಲ ಹಂತದ ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸಲು ಕೇಂದ್ರ ಸಿಬಂದಿ ಮತ್ತು ತರಬೇತಿ ಇಲಾಖೆ ಸೂಚನೆ ನೀಡಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸದ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಲಾಗಿದೆ.
ಗುರುತರ ಆರೋಪ ಎದುರಿಸುತ್ತಿದ್ದ ವಿತ್ತ ಸಚಿವಾಲಯದ 15 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿರುವ ಬೆನ್ನಲ್ಲೇ ಈ ಸೂಚನೆ ರವಾನೆಯಾಗಿದೆ. ಮುಂದಿನ ತಿಂಗಳ 15ರ ಒಳಗಾಗಿ ಎಲ್ಲ ಸಚಿವಾಲಯಗಳ ವ್ಯಾಪ್ತಿಯಲ್ಲಿರುವ ಸರಕಾರಿ ಸಂಸ್ಥೆಗಳ ಮುಖ್ಯಸ್ಥರು ಸೂಚಿತ ಮಾದರಿಯಲ್ಲಿ ಉದ್ಯೋಗಿಗಳ ಬಗ್ಗೆ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
Advertisement