ಸುವರ್ಣ ವಿಧಾನಸೌಧ: ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಕಾಫಿ, ಏಲಕ್ಕಿ ಮತ್ತಿತರ ಪ್ಲಾಂಟೇಶನ್ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಭೂ ಕಂದಾಯ ಅಧಿನಿಯಮ ತಿದ್ದುಪಡಿಗೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು.
ಈ ಮೂಲಕ ಇನ್ನುಮುಂದೆ 25 ಎಕ್ರೆ ವರೆಗಿನ ಕೃಷಿಕರು ತಮ್ಮ ಜಮೀನಿಗೆ ತಾಗಿಕೊಂಡಂತೆ ಇರುವ ಒತ್ತುವರಿ ಭೂಮಿಯನ್ನು 30 ವರ್ಷಗಳ ಮಟ್ಟಿಗೆ ಲೀಸ್‌ಗೆ ಪಡೆಯಬಹುದು.
ಗುರುವಾರ ಕಲಾಪದ ವೇಳೆ ಈ ಕುರಿತ ಕರ್ನಾಟಕ ಭೂಕಂದಾಯ(ಮೂರನೇ ತಿದ್ದುಪಡಿ) ವಿಧೇಯಕ-2022ನ್ನು ಮಂಡಿಸಿದ ಕಂದಾಯ ಸಚಿವ ಆರ್.ಅಶೋಕ್, ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರದ ಕೆಲವು ತಾಲೂಕುಗಳಲ್ಲಿ ಕೃಷಿಕರ ಜಮೀನುಗಳಿಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಸುಮಾರು 50 ವರ್ಷಗಳಿಂದ ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಅದನ್ನು ಗ್ರ್ಯಾಂಟ್ ಅಥವಾ ಲೀಸ್ ಮೂಲಕ ಕೊಡಿ ಎಂದು ಕೇಳಿಕೊಂಡಿದ್ದರು. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ಈಗ ವಿಧೇಯಕದ ಮೂಲಕ ಅದನ್ನು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.
ಒತ್ತುವರಿ ಮಾಡಿಕೊಂಡಿರುವ ಜಾಗ ಹೇಗಾದರೂ ಸರ್ಕಾರ ಮತ್ತೆ ತೆರವುಗೊಳಿಸುವುದು ಕಷ್ಟ, ಅದನ್ನು ಈ ರೀತಿ ಗುತ್ತಿಗೆಗೆ ಒಂದು ಬೆಲೆಗೆ ಕೊಟ್ಟರೆ ಅದು ಸರಕಾರಿ ಜಮೀನಾಗಿಯೇ ಉಳಿಯುತ್ತದೆ ಸರಕಾರಕ್ಕೂ ಆದಾಯ ಬಂದಂತಾಗುತ್ತದೆ ಎಂದು ತಿಳಿಸಿದರು.
01-01-2005ಕ್ಕೂ ಮೊದಲು ಈ ಭೂಮಿಗಳ ಅನಧಿಕೃತ ಅಧಿಭೋಗದಲ್ಲಿದ್ದು ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಯಾವುದೇ ಕುಟುಂಬ 25 ಎಕರೆವರೆಗಿನ ಭೂಮಿಯನ್ನು ಗುತ್ತಿಗೆಗೆ ಪಡೆಯಬಹುದು, ಈ ಕುರಿತಾಗಿ ಹಲವು ಸದಸ್ಯರು, ವಿಪಕ್ಷ ಸೇರಿದಂತೆ ಸಮಾಲೋಚಿಸಿ ಈ ಗುತ್ತಿಗೆ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
25 ಎಕರೆ ಜಾಸ್ತಿ ಆಯ್ತು, 10 ಸಾಕು: ಸಿದ್ದರಾಮಯ್ಯ:
ಸಣ್ಣ ರೈತರಿಗೆ ಮಾತ್ರ ನೆರವಾಗಬೇಕು, ಶ್ರೀಮಂತರಿಗೆ ಬೇಡ, ಹಾಗಾಗಿ 25 ಎಕರೆ ಭೂಮಿಯನ್ನು ಗುತ್ತಿಗೆಗೆ ಕೊಡುವುದು ಜಾಸ್ತಿ ಆಯ್ತು, ಸ್ವತಃ ಪ್ಲಾಂಟರುಗಳೇ ನನ್ನನ್ನು ಹಿಂದೆ ಭೇಟಿಯಾದಾಗ ಅಷ್ಟು ಸಾಕು ಎಂದಿದ್ದರು, ನಾವೂ ಬಜೆಟ್‌ನಲ್ಲಿ 10 ಎಕ್ರೆ ಲೀಸ್ ಕೊಡುವುದಾಗಿ ಘೋಷಿಸಿದ್ದೆವು ಎಂದರು. ಶಾಸಕ ಕೆ.ಜಿ.ಬೋಪಯ್ಯ, ಮಂಜುನಾಥ್, ಮುಂತಾದವರು ವಿಧೇಯಕವನ್ನು ಸ್ವಾಗತಿಸಿ ಮಾತನಾಡಿದರು.
ಮುಂದಿನ ಅಧಿವೇಶನದಲ್ಲಿ ಕುಮ್ಕಿ ಮುಂದಿನ ಅಧಿವೇಶನದಲ್ಲಿ ಕರಾವಳಿ, ಮಲೆನಾಡಿನಲ್ಲಿ ಕೃಷಿಕರು ಒತ್ತುವರಿ ಮಾಡಿಕೊಂಡಿರುವ ಕುಮ್ಕಿ, ಕಾನ, ಬಾಣೆ, ಸೊಪ್ಪಿನಬೆಟ್ಟ ಇತ್ಯಾದಿಗಳನ್ನೂ ಇದೇ ರೀತಿ ಮಾಡಲು ಮನವಿ ಮಾಡಿದರು.