ಲಂಡನ್: ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ಈ ಕುರಿತು ಟ್ವೀಟ್ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ, ಒಂದರ್ಥದಲ್ಲಿ ನಾನೂ ಕೂಡಾ ಪರೋಕ್ಷವಾಗಿ ವಿಜಿ ಸಿದ್ದಾರ್ಥ ಅವರ ಸಾಲಿಗೆ ಸೇರಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ ಸಿದ್ದಾರ್ಥ ಸಾವಿನ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿ ಬ್ಯಾಂಕ್ ಹಾಗೂ ಸರಕಾರಿ ಸಂಸ್ಥೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಜಿ ಸಿದ್ದಾರ್ಥ ಉತ್ತಮ ವ್ಯಕ್ತಿಯಾಗಿದ್ದರು ಹಾಗೂ ಒಳ್ಳೆಯ ಉದ್ಯಮಿಯಾಗಿದ್ದರು. ಸಿದ್ದಾರ್ಥ ಕೆಫೆ ಕಾಫಿ ಡೇ ಸಿಬ್ಬಂದಿಗಳು, ಆಡಳಿತ ಮಂಡಳಿ ನಿರ್ದೇಶಕರಿಗೆ ಬರೆದ ಪತ್ರದಲ್ಲಿನ ಅಂಶಗಳನ್ನು ಓದಿದ ನನಗೆ ಆಘಾತವಾಗಿದೆ. ಐಟಿ ಸೇರಿದಂತೆ ಸರಕಾರಿ ಸಂಸ್ಥೆಗಳು, ಬ್ಯಾಂಕ್ ಗಳು ಯಾರನ್ನೂ ಬೇಕಾದರೂ ಹತಾಶೆಗೆ ತಳ್ಳುತ್ತದೆ. ಈಗ ನನ್ನ ಪರಿಸ್ಥಿತಿಯನ್ನೇ ನೋಡಿ ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದರೂ ಅವಕಾಶ ಕೊಡುತ್ತಿಲ್ಲ ಎಂದು ಟ್ವೀಟ್ ನಲ್ಲಿ ಅಲವತ್ತುಕೊಂಡಿದ್ದಾರೆ.
Related Articles
ಮತ್ತೊಂದು ಟ್ವೀಟ್ ನಲ್ಲಿ, ವಿದೇಶಗಳಲ್ಲಿ ಸಾಲಗಾರರನಿಗೆ ಸಾಲ ಮರುಪಾವತಿಸಲು ಸರಕಾರ ಮತ್ತು ಬ್ಯಾಂಕ್ ಗಳು ನೆರವು ನೀಡುತ್ತವೆ. ಆದರೆ ನನ್ನ ಪ್ರಕರಣದಲ್ಲಿ ನಾನು ನನ್ನ ಆಸ್ತಿ ಮಾರಿ ಸಾಲ ಮರುಪಾವತಿಸುತ್ತೇನೆ ಎಂದು ಮನವಿ ಮಾಡಿದ್ರು ನನ್ನ ಎಲ್ಲಾ ಪ್ರಯತ್ನಗಳನ್ನು ಹತ್ತಿಕ್ಕುತ್ತಿದ್ದಾರೆ. ಮತ್ತು ನನ್ನ ಆಸ್ತಿಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟದ ಕ್ರಿಮಿನಲ್ ಪ್ರಕರಣ ಇದೀಗ ಮೇಲ್ಮನವಿ ಸಲ್ಲಿಸುವ ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.