Advertisement

ಕೃಷ್ಣಪ್ಪ, ಪ್ರಿಯಕೃಷ್ಣ ಪರ ಪ್ರಿಯಾಂಕಾ ಅದ್ಧೂರಿ ರ್‍ಯಾಲಿ  

11:14 AM May 09, 2023 | Team Udayavani |

ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ನಗರದಲ್ಲಿ ಸುಮಾರು 30 ಜನ ರಸ್ತೆಗುಂಡಿಗಳಿಗೆ ಬಲಿಯಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಂತೂ ಶೂನ್ಯ. ಇದು ಆ ಪಕ್ಷದ ಆಡಳಿತ ವೈಖರಿಗೆ ಕನ್ನಡಿ ಹಿಡಿಯುತ್ತಿದೆ ಎಂದು ಕಾಂಗ್ರೆಸ್‌ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದರು.

Advertisement

ವಿಜಯನಗರದಲ್ಲಿ ಸೋಮವಾರ ವಿಜಯನಗರ ಕಾಂಗ್ರೆಸ್‌ ಅಭ್ಯರ್ಥಿ ಎಂ. ಕೃಷ್ಣಪ್ಪ ಮತ್ತು ಗೋವಿಂದ ರಾಜನಗರ ಅಭ್ಯರ್ಥಿ ಪ್ರಿಯಕೃಷ್ಣ ಅವರ ಪರ ಜಂಟಿಯಾಗಿ ಅದ್ಧೂರಿ ರೋಡ್‌ ಶೋ ನಡೆಸಿ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿಯೇ 10 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಆದರೆ, ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಯಿತು. ಈ ಮಧ್ಯೆ 30 ಜನ ರಸ್ತೆಗುಂಡಿಗಳಿಗೆ ಬಲಿಯಾದರು ಎಂದು ದೂರಿದರು.

ಸರ್ಕಾರದಲ್ಲಿರುವ ಸಚಿವರ ಚಿತ್ತ ಬರೀ ಲಂಚ, ಹಣ ಮಾಡುವುದರ ಕಡೆಗೆ ಇದೆಯೇ ಹೊರತು, ಜನರ ಸಮಸ್ಯೆಗಳ ಬಗ್ಗೆ ಚಿಂತೆಯೇ ಇಲ್ಲ. ಕಳೆದ 3 ವರ್ಷಗಳಲ್ಲಿ ಈ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಮಾಡುವುದು, ಸಚಿವರು ಹಣ ಮಾಡುವುದರಲ್ಲೇ ನಿರತವಾಗಿತ್ತು. ಜನರ ಬಗ್ಗೆ ಯಾವುದೇ ಕಾಳಜಿ ಇವರಿಗಿಲ್ಲ. ಇದೆಲ್ಲದರ ಪರಿಣಾಮವನ್ನು ಜನ ಎದುರಿಸುತ್ತಿದ್ದಾರೆ. ಬೆಲೆ ಏರಿಕೆ ಎಷ್ಟು ಕಷ್ಟ ತಂದಿವೆ ಅಂತ ಜನರಿಗೆ ಚೆನ್ನಾಗಿ ಗೊತ್ತಿದೆ. ಅಡುಗೆ ಅನಿಲ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಇಂದು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಎಸ್‌ಟಿಯಿಂದ ಇಂದು ಸಣ್ಣ ಉದ್ದಿಮೆದಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಯಾರ ಉದ್ಯಮವೂ ಅಭಿವೃದ್ಧಿಯಾಗಿಲ್ಲ. ಜಿಎಎಸ್ಟಿ ಮೂಲಕ ಸರ್ಕಾರ ಲಂಚ ಪಡೆಯುತ್ತಿದೆ ಎಂದು ಆರೋಪಿಸಿದ ಅವರು, ವಿಧಾನಸಭಾ ಚುನಾವಣೆಯ ಕೊನೆಯ ದಿನದ ಬಹಿರಂಗ ಪ್ರಚಾರವಾಗಿದೆ. ಮೇ 10 ಮತದಾನದ ದಿನವಾಗಿದೆ. ಇದುವರೆಗಿನ ಪ್ರಚಾರದಲ್ಲಿ ಜನರ ಕಷ್ಟ ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ಬವಣೆಗಳ ಬಗ್ಗೆ ಕಾಂಗ್ರೆಸ್‌ ಬೆಳಕು ಚೆಲ್ಲಿದೆ ಮತ್ತು ಎಂದಿಗೂ ಅವರ ಪರ ದನಿ ಎತ್ತಿದೆ. ರಾಜ್ಯದ ಭವಿಷ್ಯ ನಿರ್ಧರಿಸುವ ಶಕ್ತಿ ನಿಮ್ಮಲ್ಲಿದೆ ಎಂದರು.

Advertisement

ಗೋವಿಂದರಾಜನಗರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ರ್ಯಾಲಿಯಲ್ಲಿ ಭಾಗವಹಿಸಿದ್ದರು.

ರ್‍ಯಾಲಿಯುದ್ದಕ್ಕೂ ಹೂಮಳೆ, ಜೈಕಾರ: ಬಹಿರಂಗ ಪ್ರಚಾರದ ಕೊನೆ ದಿನವಾದ ಸೋಮವಾರ ಜಿ.ಟಿ. ಮಾಲ್‌ನಿಂದ ಪ್ರಾರಂಭವಾದ ರೋಡ್‌ ಶೋ ಬನಶಂಕರಿ ದೇವಸ್ಥಾನ ರಸ್ತೆ, ಪೈಪ್‌ಲೈನ್‌ ರಸ್ತೆ ಹಾಗೂ ವಿಜಯನಗರ ಕ್ಲಬ್‌ ರಸ್ತೆವರೆಗೂ ನಡೆಯಿತು. ಇದೇ ವೇಳೆ ವಿಜಯನಗರ ಕ್ಲಬ್‌ ರೋಡ್‌ನ‌ಲ್ಲಿ ಪ್ರಿಯಾಂಕಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಇದಕ್ಕೆ ಸಾವಿರಾರು ಜನ ಸಾಕ್ಷಿಯಾದರು. ರ್ಯಾಲಿಯುದ್ದಕ್ಕೂ ಅಭಿಮಾನಿಗಳು, ಬೆಂಬಲಿಗರು ಹೂವಿನ ಮಳೆಗರೆದು ಸ್ವಾಗತ ಕೋರಿದರು. ಮಾರ್ಗದುದ್ದಕ್ಕೂ ಅಭ್ಯರ್ಥಿ ಮತ್ತು ನೆಚ್ಚಿನ ನಾಯಕಿ ಪರ ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next