ಬೆಂಗಳೂರು : ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಅಜ್ರಿ, ಕೊಡ್ಲಾಡಿ, ಅಂಪಾರು, ಕರ್ಕುಂಜೆ, ಸಿದ್ದಾಪುರ ಹಾಗೂ ಇತರೆ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಇಂದು ರಾಜ್ಯ ಸಚಿವ ಸಂಪುಟ ತನ್ನ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಗುರುವಾರ ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ ರೈತರ ನೀರಾವರಿ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಣಯ ಕೈಗೊಂಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಸಿದ್ದಾಪುರ, ಅಂಪಾರು, ಅಜ್ರಿ ಮತ್ತು ಕೊಡ್ಲಾಡಿ ಗ್ರಾಮಗಳ ಪ್ರದೇಶವು ವಾರಾಹಿ ಬಲದಂಡೆ ನಾಲೆಯ ಬಲ ಭಾಗದಲ್ಲಿ ಬರುವುದರಿಂದ ಈ ಭಾಗದ ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಈ ಪ್ರದೇಶದ ಬಹುಭಾಗವು ಕೃಷಿ ಭೂಮಿಯಾಗಿದ್ದು, ನೀರಾವರಿಯು ಅಗತ್ಯವಾಗಿರುವುದರಿಂದ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ನೀರಾವರಿ ಸೌಲಭ್ಯವನ್ನು ಒದಗಿಸುವಂತೆ ಮನವಿಯನ್ನು ಮಾಡಿದ್ದಾರೆ. ಹಾಗಾಗಿ ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಲುವಂತೆ ಸಂಪುಟ ಅನುಮೋದನೆ ನೀಡಿದೆ.
ಇದನ್ನೂ ಓದಿ : ಬಿಜೆಪಿ ರಾಜಕೀಯ ಲೆಕ್ಕಾಚಾರ : ಯುಪಿ ರಾಜ್ಯಾಧ್ಯಕ್ಷ ಹುದ್ದೆಗೆ ಜಾಟ್ ನಾಯಕ