ಮುಧೋಳ: ಕಾಂಗ್ರೆಸ್‌ನವರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತೆಗಳಿದರೆ ಹೀರೋ ಆಗುತ್ತೇವೆ ಎಂದು ಭ್ರಮೆಯಲ್ಲಿದ್ದಾರೆ. ಪ್ರಜ್ಞಾವಂತ ಜನತೆ ಅವರನ್ನು ಜೀರೋ ಮಾಡುವುದು ಶತಸಿದ್ಧ. ಇದನ್ನರಿತು ಕಾಂಗ್ರೆಸ್ ಅಪಪ್ರಚಾರ, ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಬಿಜಿಎಂಐಟಿ ಕಾಲೇಜಿನಲ್ಲಿ ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿ ಪಿ.ಎಚ್. ಪೂಜಾರ ಪ್ರಚಾರಾರ್ಥ ಬುಧವಾರ ಹಮ್ಮಿಕೊಂಡಿದ್ದ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು. ದೇಶದ 40 ವರ್ಷದ ಇತಿಹಾಸದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅ ಧಿಕಾರಕ್ಕೆ ಬಂದಿದೆ. ಆರ್ಥಿಕ ಸಂಕಷ್ಟಗಳ ಮಧ್ಯೆ ಕೊರೊನಾ ಸೋಕು ನಿರ್ಮೂಲನೆ ಮಾಡಲು
ಪ್ರಧಾನಿ ಮೋದಿ ಯುದ್ದೋಪಾದಿಯಲ್ಲಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಮುಖಂಡರು ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದರು. ಅದಕ್ಕಾಗಿ ಎಲ್ಲ ರಾಜ್ಯಗಳಲ್ಲಿ ಅಧಿಕಾರವಿಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದರು.
ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಪೂಜಾರ ಪಾತ್ರ ಹಿರಿದಾಗಿದೆ. ಅನುಭವಿಗಳು, ಕ್ರಿಯಾಶೀಲರು ಆಗಿರುವ ಅವರು ದಾಖಲೆ ಮತಗಳ ಅಂತರದಿಂದ ಜಯ ಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಕೆಲಸ ಕಾರ್ಯ ನೋಡಿರುವ ಜನರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಲು ಉತ್ಸುಕರಾಗಿದ್ದಾರೆ. ಎಲ್ಲೆಡೆ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ನಗರಸಭೆ ಹಂಗಾಮಿ ಅಧ್ಯಕ್ಷೆ ಸ್ವಾತಿ ಕುಲಕರ್ಣಿ, ಅರುಣ ಕಾರಜೋಳ, ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ, ಕಾರ್ಯದರ್ಶಿ ಶ್ರೀಶೈಲಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಣ್ಣ ತಳೇವಾಡ, ಜಿಪಂ ಮಾಜಿ ಸದಸ್ಯ ಭೀಮನಗೌಡ ಪಾಟೀಲ, ರಾಜ್ಯ ರಸ್ತೆ ನಿಗಮದ ನಿರ್ದೇಶಕ ಕೆ.ಆರ್. ಮಾಚಪ್ಪನವರ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ನಾಗಪ್ಪ ಅಂಬಿ, ಡಾ| ವಿಜಯಲಕ್ಷ್ಮೀತುಂಗಳ, ಎಂ.ಎಂ. ವಿರಕ್ತಮಠ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಳಲಿ, ಬಿಜೆಪಿ ಅಧ್ಯಕ್ಷರಾದ ಹಣಮಂತ ತುಳಸಿಗೇರಿ, ಡಾ| ರವಿ ನಂದಗಾಂವಿ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ, ರಾಕೇಶ ಗಣಿ, ಯುವ ಮೋರ್ಚಾ
ಅಧ್ಯಕ್ಷ ಪ್ರದೀಪ ನಿಂಬಾಳಕರ, ಬಸವರಾಜ ಮಾನೆ ಸೇರಿದಂತೆ ಇತರರಿದ್ದರು.