ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸೆನ್ಸಾರ್ ಮಂಡಳಿಯ ಬಗ್ಗೆ ಹಗುರವಾಗಿ ಮಾತನಾಡಿರುವ ನಿರ್ದೇಶಕ ಟೇಶಿ ವೆಂಕಟೇಶ್ ಅವರ ನಡೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಇದೊಂದು ಪ್ರಚಾರ ಗಿಟ್ಟಿಸುವ ತಂತ್ರ ಎಂದು ಹೇಳಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಕುರಿತಾಗಿ ಇತ್ತೀಚೆಗೆ ಕೆಲವು ಅಪಸ್ವರಗಳು ಕೇಳಿ ಬಂದಿತ್ತು.
ಈ ಸಂಬಂಧ ಕರ್ನಾಟಕ ಚಲನಚಿತ್ರೋದ್ಯಮ ಪರಿಷತ್ ರಾಜ್ಯಾಧ್ಯಕ್ಷ ಟೇಶಿ ವೆಂಕಟೇಶ್ ಅವರು ಮಂಗಳವಾರ ಒಂದು ಪತ್ರಿಕಾಗೋಷ್ಠಿ ಕರೆದು, ಸೆನ್ಸಾರ್ ಮಂಡಳಿಯಿಂದ ಕನ್ನಡ ನಿರ್ಮಾಪಕರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿವೆ ಎಂದು ದೂರಿದ್ದರು. ಸೆನ್ಸಾರ್ ಮಂಡಳಿಯ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದರು.
ಈ ಕುರಿತು ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಟೇಶಿ ವೆಂಕಟೇಶ್ ಅವರ ಮಾತು ಮತ್ತು ನಡೆಯನ್ನು ಖಂಡಿಸಿದ್ದಾರೆ. “ಸೆನ್ಸಾರ್ ಮಂಡಳಿಯಿಂದ ಕೆಲವು ಸಮಸ್ಯೆ ಆಗುತ್ತಿದೆ ಎಂದು ಇತ್ತೀಚೆಗೆ ಕೆಲವು ನಿರ್ಮಾಪಕರು ಮಂಡಳಿಗೆ ಪತ್ರ ಕೊಟ್ಟಿದ್ದರು. ಅದರಂತೆ ಇದೇ ತಿಂಗಳ 23ರಂದು ಮಂಡಳಿಯಲ್ಲಿ ಸಭೆ ಕರೆದಿದ್ದೆ. ಸೆನ್ಸಾರ್ ಮಂಡಳಿಯ ಜೊತೆಗೆ ಅಂದು ಮೂರು ಗಂಟೆಗಳ ಕಾಲ ಸಭೆ ನಡೆಯಿತು.
ಈ ಸಂದರ್ಭದಲ್ಲಿ ವೆಂಕಟೇಶ್ ಸಹ ಹಾಜರಿದ್ದು, ತಮ್ಮ ಸಮಸ್ಯೆಗಳನ್ನು ಚರ್ಚಿಸಿದ್ದರು. ಇದಕ್ಕೆ ಸೆನ್ಸಾರ್ ಮಂಡಳಿಯ ಶ್ರೀನಿವಾಸಪ್ಪನವರು ಸಹ ಸೂಕ್ತ ಉತ್ತರಗಳನ್ನು ನೀಡಿದ್ದರು. ಇಷ್ಟೆಲ್ಲಾ ಆದಮೇಲೆ ಪ್ರತ್ಯೇಕ ಪತ್ರಿಕಾಗೋಷ್ಠಿ ಕರೆದು ಸೆನ್ಸಾರ್ ಮಂಡಳಿಯಿಂದ ಸಮಸ್ಯೆಯಾಗುತ್ತಿದೆ, ವಾಣಿಜ್ಯ ಮಂಡಳಿಯು ಸ್ಪಂದಿಸಲಿಲ್ಲ ಎಂದು ಹೇಳಿಕೆ ನೀಡುವುದು ಎಷ್ಟು ಸೂಕ್ತ. ಸಮಸ್ಯೆ ಇದ್ದಿದ್ದರೆ ಅದನ್ನು ಮಂಡಳಿಗೆ ಬಂದು ಬಗೆಹರಿಸಿಕೊಳ್ಳಬಹುದಿತ್ತು.
ಅದು ಬಿಟ್ಟು, ಪತ್ರಿಕಾಗೋಷ್ಠಿ ಮಾಡುವ ಅವಶ್ಯಕತೆ ಏನಿತ್ತು. ಇದೆಲ್ಲಾ ಪ್ರಚಾರ ಪಡೆಯುವ ಒಂದು ತಂತ್ರ’ ಎಂದು ಗೋವಿಂದು ಹೇಳಿದರು. “ಯಾವುದೇ ಸಮಸ್ಯೆ ಇರಲಿ, ಆ ಕುರಿತು ವಾಣಿಜ್ಯ ಮಂಡಳಿಗೆ ದೂರು ಕೊಟ್ಟರೆ ಅಥವಾ ಗಮನಕ್ಕೆ ತಂದರೆ ಮಾತ್ರ ಏನಾದರೂ ಕ್ರಮ ಕೈಗೊಳ್ಳಬಹುದು. ಅದ್ಯಾವುದೂ ಮಾಡದೆ, ಪತ್ರಿಕಾಗೋಷ್ಠಿ ಮಾಡಿ ಆರೋಪ ಹೊರಿಸುವುದು ತಪ್ಪು’ ಎಂದು ಗೋವಿಂದು ಹೇಳಿದರು.