ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧದ ನ್ಯಾಯಾಂಗ ನಿಂದನೆ ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ರಾಜ್ಯಪಾಲರು ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಅವಕಾಶ ನೀಡಿದ ಹೈಕೋರ್ಟ್ ತೀರ್ಪನ್ನು “ರಾಜಕೀಯ ತೀರ್ಪು’ ಎಂದು ಮಾಧ್ಯಮಗಳ ಮುಂದೆ ಬಣ್ಣಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಅಡ್ವೊಕೇಟ್ ಜನರಲ್ ಅವರಿಗೆ ಸೆ. 26ರಂದು ಮನವಿ ಮಾಡಿದ್ದರು. ಆದರೆ ಆ ಮನವಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ತಮ್ಮ ಅರ್ಜಿಯ ಬಗ್ಗೆ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಎಜಿ ಅವರಿಗೆ ಸೂಚಿಸಬೇಕು ಎಂದು ಅಬ್ರಹಾಂ ರಾಜ್ಯಪಾಲರಿಗೆ ಅ. 21ರಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಅಡ್ವೊಕೇಟ್ ಜನರಲ್ ಅವರಿಗೆ ನ. 6ರಂದು ಪತ್ರ ಬರೆದು ನಿಯಮದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗ ಸೂಚನೆ ನೀಡಿ¨ªಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಅವರು ಎಜಿಗೆ ಬರೆದಿರುವ ಪತ್ರದಲ್ಲಿ ಸಚಿವ ಜಮೀರ್ ಖಾನ್ ಹೈಕೋರ್ಟ್ ತೀರ್ಪಿನ ವಿರುದ್ಧ ಗಂಭೀರ ಆರೋಪ ಮಾಡಿ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ ಎಂದು ದೂರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ದೂರು ನೀಡಿದ್ದಾರೆ. ಈ ಸಂಬಂಧ ನಿಯಮದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವಂತೆ ರಾಜ್ಯಪಾಲರಿಂದ ನಿರ್ದೇಶಿತನಾಗಿದ್ದೇನೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯದ ಘನತೆಗೆ ಕುಂದು ಉಂಟು ಮಾಡುವ ರೀತಿಯಲ್ಲಿ ಹಾಗೂ ತೀರ್ಪನ್ನು ರಾಜಕೀಯ ಚಟುವಟಿಕೆಗೆ ಹೋಲಿಸಿರುವ ಜಮೀರ್ ಅಹ್ಮದ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಟಿ.ಜೆ. ಅಬ್ರಹಾಂ ಕೋರಿದ್ದರು.
ಎಜಿಯ ಲಿಖಿತ ಅನುಮತಿ ಕಡ್ಡಾಯ
ಖಾಸಗಿ ವ್ಯಕ್ತಿಗಳು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕಾದರೆ ಎಜಿಯ ಲಿಖೀತ ಅನುಮತಿ ಪಡೆಯುವುದು ಕಡ್ಡಾಯ. ಒಂದು ವೇಳೆ ಅಡ್ವೊಕೇಟ್ ಜನರಲ್ ಅನುಮತಿ ನೀಡಿದರೆ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ನೋಟಿಸ್ ನೀಡಲಾಗುತ್ತದೆ. ಅಡ್ವೊಕೇಟ್ ಜನರಲ್ ಅನುಮತಿ ನೀಡದಿದ್ದರೆ ಅರ್ಜಿದಾರ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಲಯವು ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಬಹುದು.