Advertisement

ಜಂಟಿ ಅಧಿವೇಶನದಲ್ಲಿ ಸರಕಾರಕ್ಕೆ ರಾಜ್ಯಪಾಲರ ಮೆಚ್ಚುಗೆ

11:12 AM Feb 19, 2020 | mahesh |

ಬೆಂಗಳೂರು: ರಾಜ್ಯ ಸರಕಾರವು ಪ್ರವಾಹ ಪೀಡಿತ ಸಂತ್ರಸ್ತರ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಕೈಗೊಂಡು ಮನೆ ನಿರ್ಮಾಣ, ಮೂಲ ಸೌಕರ್ಯಗಳ ಪುನರ್‌ ಸ್ಥಾಪನೆಗೆ ಕ್ರಮ ವಹಿಸಿದೆ. ಆರ್ಥಿಕ ಮತ್ತು ಸಾಲ ಕ್ರೋಡೀಕರಣ ಗುರಿಯನ್ನು ನಿಗದಿತ ಕಾಲಾವಧಿ ಮುನ್ನವೇ ಸಾಧಿಸಿದೆ ಎಂದು ರಾಜ್ಯಪಾಲ ವಜೂಭಾಯಿ ವಾಲಾ ಸಮರ್ಥಿಸಿಕೊಂಡಿದ್ದಾರೆ.

Advertisement

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಸೋಮವಾರ ಭಾಷಣ ಮಾಡಿದ ಅವರು, ನನ್ನ ಸರಕಾರವು ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡುವ ಜತೆಗೆ ಕಾರ್ಮಿಕರು, ಮಹಿಳೆ ಯರು, ವಿದ್ಯಾರ್ಥಿಗಳ ಹಿತರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ವಿತರಣೆಯಾಗಿಲ್ಲ, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಎಂದು ಆರೋಪಿಸಿ ವಿಪಕ್ಷಗಳು ಅಧಿವೇಶನದಲ್ಲಿ ಹೋರಾಟಕ್ಕೆ ಸಜ್ಜಾಗಿರುವ ಬೆನ್ನಲ್ಲೇ ರಾಜ್ಯಪಾಲರು ಭಾಷಣದ ಮೊದಲಲ್ಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಹಾರ ಕ್ರಮಗಳನ್ನು ಪ್ರಸ್ತಾವಿಸಿದ್ದಾರೆ. ಜತೆಗೆ ರಾಜ್ಯವು ದೂರದೃಷ್ಟಿಯ ಆರ್ಥಿಕ ನಿರ್ವಹಣೆಗೆ ಸಂಪನ್ಮೂಲ ವೃದ್ಧಿ ಹಾಗೂ ಕ್ರೋಡೀಕರಣಕ್ಕೆ ಮಾರ್ಗನಕ್ಷೆ ರೂಪಿಸಿದ ಮೊದಲ ರಾಜ್ಯ ಎಂದು ಪ್ರತಿಪಾದಿಸಿದರು.

ಬರಮುಕ್ತ ಘೋಷಣೆ
ರಾಜ್ಯವನ್ನು ಬರಮುಕ್ತಗೊಳಿಸುವ ನಿಟ್ಟಿ ನಲ್ಲಿ 100 ಬರಪೀಡಿತ ತಾಲೂಕುಗಳಲ್ಲಿ ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ ಎಂಬ ಹೊಸ ಯೋಜನೆ ಜಾರಿಗೆ ತರಲು ಉದ್ದೇಶಿಸ ಲಾಗಿದೆ. 41 ತಾಲೂಕುಗಳಲ್ಲಿ ಅಂತರ್ಜಲ ನಿರ್ವಹಣ ಕಾರ್ಯ ಕೈಗೊಳ್ಳಲು ಅಟಲ್‌ ಭೂ ಜಲ ಯೋಜನೆಯಡಿ ಕೇಂದ್ರ ಸರಕಾರ ನೀಡುವ ಅನುದಾನಕ್ಕೆ ಪೂರಕವಾಗಿ ರಾಜ್ಯ ಸರಕಾರ ದಿಂದ ಹೆಚ್ಚುವರಿ ಅನುದಾನ ನೀಡಿ ರಾಜ್ಯವನ್ನು ಬರ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

ದೇಶದಲ್ಲಿಯೇ ಮೊದಲ ಸ್ಥಾನ
ಮಾತೃ ಆರೋಗ್ಯ ಪಾಲನ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಿಂದ ಗರ್ಭಿಣಿಯರ ಸಾವಿನ ಸಂಖ್ಯೆ ತಗ್ಗಿಸುವ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. “ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ’ ಯೋಜನೆಯಡಿ 3.30 ಲಕ್ಷ ಫ‌ಲಾನುಭವಿಗಳ ಚಿಕಿತ್ಸೆಗೆ ಅನುಮೋದನೆ ನೀಡ ಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಕೊಡಗು, ಕಾರವಾರ ವೈದ್ಯಕೀಯ ಕಾಲೇಜು ಆವರಣದಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ, ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ, ತುಮ ಕೂರಿನಲ್ಲಿ ಕ್ಯಾನ್ಸರ್‌ ಕೇಂದ್ರ ಸ್ಥಾಪಿಸಲು ಅನುಮತಿ ನೀಡಲಾಗಿದೆ. ಕ್ಯಾನ್ಸರ್‌ ತಪಾಸಣೆ ಸೌಲಭ್ಯ ಇಲ್ಲದ 10 ಜಿಲ್ಲಾ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಸಂಚಾರಿ ಮ್ಯಾಮೋ ಗ್ರಫಿ, ಸರ್ವಿಕಲ್‌ ಕ್ಯಾನ್ಸರ್‌ ಡಯಾಗ್ನೊà ಸ್ಟಿಕ್‌ ಯೂನಿಟ್‌ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ.

Advertisement

ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಯಾವುದೇ ರೀತಿಯ ಹೊಸ ವಿಷಯ ಇಲ್ಲ. ಇದೊಂದು ತೀರಾ ಸಪ್ಪೆ ಭಾಷಣ. ಇದರಿಂದ ನಿರಾಶೆಯಾಗಿದೆ.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಹಾರ ಮತ್ತು ಪುನರ್‌ವಸತಿ ವಿಚಾರದಲ್ಲಿ ಸರಕಾರವು ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ವಾಸ್ತವಾಂಶವೇ ಬೇರೆ. ಬೆಳೆನಾಶಕ್ಕೆ ಪರಿಹಾರ ಸಿಕ್ಕಿಲ್ಲ, ಮನೆ ಕಟ್ಟಲು ಹಣ ನೀಡಿಲ್ಲ, ಜನರ ಬದುಕು ದುಸ್ತರವಾಗಿದೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next