Advertisement

ರಾಜ್ಯದ ಡೈನಾಮಿಕ್‌ ನಾಯಕ ಬಿಎಸ್‌ವೈ

06:15 AM May 18, 2018 | |

ಶಿವಮೊಗ್ಗ/ಬೆಂಗಳೂರು/ಮಂಡ್ಯ: ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌.ಯಡಿಯೂರಪ್ಪ, ಸಂಘಟನೆ, ರಾಜಕೀಯದ ಮೂಲಕ ಬೆಳವಣಿಗೆಯನ್ನು ಕಂಡವರು. ಬಿಎಸ್‌ವೈ, ಮಂಡ್ಯ ಜಿಲ್ಲೆಯ ಪುತ್ರರಾದರೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ದತ್ತುಪುತ್ರ. ರಾಜ್ಯ ರಾಜಕಾರಣದ ಡೈನಾಮಿಕ್‌ ನಾಯಕ. 2008ರ ಚುನಾವಣೆಯಲ್ಲಿ ದಕ್ಷಿಣ ಭಾರತದ ಹೆಬ್ಟಾಗಿಲನ್ನು ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ತೆರೆಯುವಂತೆ ಮಾಡಿದ ಹೆಗ್ಗಳಿಕೆ ಇವರದು.

Advertisement

ಬಿಜೆಪಿಯ ನಿರ್ಣಾಯಕ ಮುಂದಾಳು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದವರು. 1943ರ ಫೆಬ್ರವರಿ 27ರಂದು ಜನಿಸಿದರು.

ತಮ್ಮ ಬಾಲ್ಯ ಹಾಗೂ ಪಿಯುವರೆಗೆ ವಿದ್ಯಾಭ್ಯಾಸ ಮಾಡಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತನ ಹುದ್ದೆಗೆ ಸೇರಿದರು. ವೃತ್ತಿ ಬದಲಾವಣೆಗಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರಕ್ಕೆ ತೆರಳಿದರು.

ಯಡಿಯೂರಪ್ಪನವರಿಗೆ ಮಂಡ್ಯ ಜನ್ಮ ಭೂಮಿಯಾದರೆ, ಶಿವಮೊಗ್ಗ ರಾಜಕೀಯ ಜನ್ಮಭೂಮಿಯಾಯಿತು. ಸಂಘಟನಾ ಚಾತುರ್ಯ ಹಾಗೂ ಹೋರಾಟದ ಎದೆಗಾರಿಕೆ ರೂಢಿಸಿಕೊಂಡಿದ್ದ ಅವರು, ಶಿಕಾರಿಪುರದಲ್ಲಿ ಜನಸಂಘಕ್ಕೆ ಸೇರುವ ಮೂಲಕ ತಮ್ಮ ಸಾರ್ವಜನಿಕ ಬದುಕಿನ ಅಧ್ಯಾಯಕ್ಕೆ ನಾಂದಿ ಹಾಡಿದರು. ಅಂದಿನ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದ ಬಿಎಸ್‌ವೈ, 45 ದಿನಗಳ ಕಾಲ ಜೈಲುವಾಸ  ಅನುಭವಿಸಿದರು.
ಬಗರ್‌ಹುಕುಂ ಹೋರಾಟ, ದಿನಗೂಲಿ ನೌಕರರ ಚಳವಳಿಯ ನೇತೃತ್ವ ವಹಿಸಿ ಪರಿಣಾಮಕಾರಿ ಹೋರಾಟ ನಡೆಸಿದರು.

1975ರಲ್ಲಿ ರಾಜಕೀಯ ಆರಂಭ: 1975ರಲ್ಲಿ ಶಿಕಾರಿಪುರ ಪುರಸಭಾ ಸದಸ್ಯರಾಗುವುದರೊಂದಿಗೆ ಅಧಿಕಾರ ರಾಜಕಾರಣ ಆರಂಭಿಸಿದ ಅವರು,1977ರಲ್ಲಿ ಪುರಸಭೆಯ ಅಧ್ಯಕ್ಷರಾದರು. 1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪಕ್ಷದ ಮುನ್ನಡೆಗೆ ಸಹಕಾರಿಯಾದರು. 1985ರಲ್ಲಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಯಡಿಯೂರಪ್ಪ, ಬಿಜೆಪಿಯ ಅಖಂಡ ನಾಯಕನಾಗಿ ಬೆಳವಣಿಗೆ ಸಾಧಿಸಿದರು. 1988ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ, 1989ರ ಚುನಾವಣೆಯಲ್ಲಿ 
ಗೆಲ್ಲುವುದರೊಂದಿಗೆ ಹ್ಯಾಟ್ರಿಕ್‌ ವಿಜಯ ಸಾಧಿಸಿದರು.

Advertisement

1994ರಲ್ಲೂ ವಿಧಾನಸಭೆ ಪ್ರವೇಶಿಸಿ ವಿರೋಧಪಕ್ಷದ ನಾಯಕ ನಾಗಿ ಆರ್ಭಟಿಸಿದರು. 1999ರಲ್ಲಿ ಮತ್ತೂಮ್ಮೆ ರಾಜ್ಯಾಧ್ಯಕ್ಷರಾಗಿ ವಿಜೃಂಭಿಸಿದ ಯಡಿಯೂರಪ್ಪ, ಅಷ್ಟರಲ್ಲೇ ಬಿಜೆಪಿಯ ಅಘೋಷಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದರು.

ಪ್ರತಿಪಕ್ಷನಾಯಕ: 2000ರಿಂದ 2004ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದ ಅವರು, 2004ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. ಕಾಂಗ್ರೆಸ್‌ -ಜೆಡಿಎಸ್‌ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. 2006ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ-ಜೆಡಿಎಸ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದರು. ನಂತರ,ಜೆಡಿಎಸ್‌ ವಚನ ಭ್ರಷ್ಟತೆಯಿಂದ 2008ರಲ್ಲಿ ಉಂಟಾದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ
ಪಕ್ಷೇತರರ ಬೆಂಬಲದಿಂದ ಅಧಿಕಾರ ಹಿಡಿಯಿತು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸ್ವಪಕ್ಷೀಯರ ವಿರೋಧದ ನಡುವೆಯೂ ಮೂರೂವರೆ ವರ್ಷ ಮುಖ್ಯಮಂತ್ರಿ ಯಾಗಿ ಆಡಳಿತ ನಡೆಸಿ, ಲೋಕಾಯುಕ್ತ ವರದಿ ಪರಿಣಾಮ ಸಿಎಂ ಪದವಿಗೆ ರಾಜೀನಾಮೆ ನೀಡಿದ್ದರು.

ಯಡಿಯೂರಪ್ಪ  ತವರಲ್ಲಿ ಸಂಭ್ರಮ
ಶಿವಮೊಗ್ಗ:
ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಶಿವಮೊಗ್ಗ ಸೇರಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಯಡಿಯೂರಪ್ಪ ಬೆಂಬಲಿಗರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. 

ಶಿವಮೊಗ್ಗದ ಬಿಜೆಪಿ ಕಚೇರಿ ಹಾಗೂ ಗೋಪಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಯಡಿಯೂರಪ್ಪನವರಿಗೆ ಜಯಘೋಷ ಹಾಕಿದರು. ಯುವ ಕಾರ್ಯಕರ್ತರು ಬೈಕ್‌ ರ್ಯಾಲಿ ನಡೆಸುವ ಮೂಲಕ ಸಂಭ್ರಮಿಸಿದರು. ಬಿಜೆಪಿ ಬಾವುಟ ಹಿಡಿದು ಜಯಘೋಷ ಹಾಕುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.

ಕುಟುಂಬ ಸದಸ್ಯರ ಉಪಸ್ಥಿತಿ
ಬೆಂಗಳೂರು
: ರಾಜಭವನದಲ್ಲಿ ಗುರುವಾರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಬಿ.ಎಸ್‌. ಯಡಿಯೂರಪ್ಪನವರ ಕುಟುಂಬ ಸದಸ್ಯರು ಹಾಜರಿದ್ದು, ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿಎಸ್‌ವೈ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳನ್ನು ಕಣ್ತುಂಬಿಕೊಂಡರು. ಪುತ್ರ ವಿಜಯೇಂದ್ರ, ಪುತ್ರಿ ಉಮಾದೇವಿ ಸೇರಿ ಕುಟುಂಬದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

ಹೆಚ್ಚು ಸಿಎಂ ನೀಡಿದ ಜಿಲ್ಲೆ ಶಿವಮೊಗ್ಗ
ಶಿವಮೊಗ್ಗ:
ರಾಜ್ಯದ ನೂತನ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಜಿಲ್ಲೆಯ ಮುಕುಟಕ್ಕೆ ಮತ್ತೂಂದು ಗರಿ ಸೇರಿದಂತಾಗಿದೆ. ಈಗಾಗಲೇ ಹೆಚ್ಚು ಸಂಖ್ಯೆಯ ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ ಎಂಬ ಹೆಗ್ಗಳಿಕೆಯ ಜತೆ 3 ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಕೂಡ ಶಿವಮೊಗ್ಗ ಜಿಲ್ಲೆಯ
ವರೇ ಎಂಬ ಇನ್ನೊಂದು ಹೆಗ್ಗಳಿಕೆ ಕೂಡ ದಕ್ಕಿದೆ.

ಕಡಿದಾಳು ಮಂಜಪ್ಪ, ಬಂಗಾರಪ್ಪ, ಜೆ.ಎಚ್‌.ಪಟೇಲ್‌, ಯಡಿಯೂರಪ್ಪ ಅವರನ್ನು ಸಿಎಂ ಆಗಿ ನೀಡಿದ ಜಿಲ್ಲೆ ಎಂಬ ಹೆಗ್ಗಳಿಕೆ ಇದುವರೆಗೆ ಇತ್ತು. ರಾಜ್ಯದಲ್ಲಿ ಇದುವರೆಗೆ ರಾಮಕೃಷ್ಣ ಹೆಗಡೆ ಮಾತ್ರ 3 ಬಾರಿ ಮುಖ್ಯಮಂತ್ರಿಯಾಗಿ 
ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಆ ದಾಖಲೆಯನ್ನು ಯಡಿಯೂರಪ್ಪ ಸರಿಗಟ್ಟಿದ್ದಾರೆ. 2007ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಎಸ್‌ವೈ 7 ದಿನಗಳ ಕಾಲ ಆ ಹುದ್ದೆಯಲ್ಲಿದ್ದರು. ಜೆಡಿಎಸ್‌ ಬೆಂಬಲ ನೀಡದ ಕಾರಣ ರಾಜೀನಾಮೆ ನೀಡಿ ಚುನಾವಣೆಗೆ ಧುಮುಕಿದರು. 2008ರ ಮೇ ತಿಂಗಳಲ್ಲಿ ಪುನಃ ಬಹುಮತದೊಂದಿಗೆ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.ಇದೀಗ 2018 ರ ಮೇ 17 ರಂದು ಪುನಃ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬಿಎಸ್‌ವೈ-ಈಶ್ವರಪ್ಪ ನಿವಾಸಕ್ಕೆ ಬಿಗಿ ಭದ್ರತೆ
ಶಿವಮೊಗ್ಗ
: ವಿನೋಬನಗರದಲ್ಲಿನ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪನವರ ನಿವಾಸ ಹಾಗೂ ಮಲ್ಲೇಶ್ವರ
ನಗರದಲ್ಲಿರುವ ಕೆ.ಎಸ್‌.ಈಶ್ವರಪ್ಪನವರ ನಿವಾಸಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಕೆಎಸ್‌ಆರ್‌ಪಿ
ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಕಾಂಗ್ರೆಸ್‌ ಅಥವಾ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮುನ್ಸೂಚನೆ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಬಂದೋಬಸ್ತ್ ಕೈಗೊಂಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next