ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ಐವರು ಹಾಗೂ ಸೇವೆ ಕಾಯಂಗೊಂಡಿರುವ ಏಳು ಮಂದಿ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನ್ಯಾಯಮೂರ್ತಿಗಳಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಸೇವಾ ಹಿರಿತನದ ಮೇಲೆ ಜಿಲ್ಲಾ ನ್ಯಾಯಾಧೀಶರಾಗಿದ್ದ ಅಶೋಕ್ ಜಿ. ನಿಜಗಣ್ಣನವರ್, ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ್, ಕೃಷ್ಣನ್ ನಟರಾಜನ್, ಪ್ರಹ್ಲಾದ್‌ರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ…, ಅಪ್ಪಾ ಸಾಹೇಬ್ ಶಾಂತಪ್ಪ ಬೆಳ್ಳುಂಕೆ ಅವರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳ ಸ್ಥಾನಕ್ಕೆ ಬಡ್ತಿ ನೀಡಲಾಗಿತ್ತು. ಅವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.
ಅದೇ ರೀತಿ ಸೇವೆ ಕಾಯಂಗೊಂಡಿರುವ ನ್ಯಾ. ಕೆಂಪಯ್ಯ ಸೋಮಶೇಖರ್, ನ್ಯಾ. ಕೆ.ಎಸ್. ಮುದಗಲ್, ನ್ಯಾ. ಶ್ರೀನಿವಾಸ ಹರೀಶ್‌ಕುಮಾರ್, ಜಾನ್ ಮೈಕೆಲ್ ಕುನ್ಹಾ, ನ್ಯಾ. ಬಿ.ಎ ಪಾಟೀಲ್, ನ್ಯಾ. ಎನ್.ಕೆ. ಸುಧೀಂದ್ರರಾವ್, ನ್ಯಾ. ಎಚ್. ಪ್ರಭಾಕರ ಶಾಸ್ತ್ರೀ ಇವರಿಗೂ ಸಹ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ಮುಖ್ಯಮಂತ್ರಿ ಎಚ್,ಡಿ. ಕುಮಾರಸ್ವಾಮಿ, ಕಾನೂನು ಸಚಿವ ಕೃಷ್ಣಭೈರೇಗೌಡ, ಹೈಕೋರ್ಟ್‌ನ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.