Advertisement
ಜತೆಗೆ, ರಾಜ್ಯದಲ್ಲಿ ಜನಾದೇಶ ಗೌರವಿಸಿ ಬಿಜೆಪಿ ಅಧಿಕಾರ ನಡೆಸಲು ಬಿಡಬೇಕು ಎಂಬ ಭಾವನೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಹಲವಾರು ಶಾಸಕರಲ್ಲಿದೆ ಎಂದು “ಬಾಂಬ್’ ಹಾಕಿದ ಅವರು ಆತ್ಮಸಾಕ್ಷಿ ಮತಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
Related Articles
Advertisement
ಮೈತ್ರಿಗೆ ಆಕ್ರೋಶ:ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ಅನೈತಿಕ ಒಪ್ಪಂದದ ಮೂಲಕ ಜನಾದೇಶಕ್ಕೆ ವಿರುದ್ಧವಾಗಿ ಸರ್ಕಾರ ರಚಿಸಲು ಎರಡೂ ಪಕ್ಷಗಳು ಪ್ರಯತ್ನ ನಡೆಸುತ್ತಿವೆ ಎಂದು ದೂರಿದರು. ಅಲ್ಲದೆ, ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನಾನು, ರಾಜ್ಯದ ಆರು ಕೋಟಿ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಬೆಂಬಲಿಸಿದ ರೈತರು, ದಲಿತ ಹಾಗೂ ಹಿಂದುಳಿದ ಸಮುದಾಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ನಾನೇನೂ ಉತ್ತರಿಸೋದಿಲ್ಲ:
ಬಹುಮತ ಸಾಬೀತು ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ್ಯಾಯಾಲಯಕ್ಕೆ ಹೋಗಿವೆ. ಆ ಬಗ್ಗೆ ನಾನೇನೂ ಮಾತನಾಡಲು ಹೋಗಿಲ್ಲ. ನನಗೆ ನ್ಯಾಯಾಂಗದ ಬಗ್ಗೆ ಗೌರವವವಿದೆ ಎಂದು ಹೇಳಿದರು. ಸಂಪುಟ ಪುನಾರಚನೆ, ಬಹುಮತ ಸಾಬೀತುಪಡಿಸಲು ಸಂಖ್ಯಾಬಲ ಹೊಂದಿಸಿಕೊಳ್ಳುವಿಕೆ, ಕಾಂಗ್ರೆಸ್-ಜೆಡಿಎಸ್ ಆರೋಪ, ಬಹುಮತ ಹೊಂದಿರುವ ಮೈತ್ರಿಕೂಟಕ್ಕೆ ಆಹ್ವಾನ ನೀಡದಿರುವುದು ಮತ್ತಿತರ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದ ಯಡಿಯೂರಪ್ಪ ಅವರು, ಮುಂದೆ ಎಲ್ಲವೂ ನಿಮಗೇ ಗೊತ್ತಾಗಲಿದೆ ಎಂದಷ್ಟೇ ಹೇಳಿ ನಿರ್ಗಮಿಸಿದರು. ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಹರತಾಳು ಹಾಲಪ್ಪ, ಡಿ.ಎಸ್.ವೀರಯ್ಯ, ಎಸ್.ಆರ್.ವಿಶ್ವನಾಥ್ ಉಪಸ್ಥಿತರಿದ್ದರು.ಆದರೆ, ಪ್ರಮಾಣ ವಚನ ಸಮಾರಂಭದಲ್ಲಿದ್ದ ಕೆ.ಎಸ್. ಈಶ್ವರಪ್ಪ, ಶ್ರೀರಾಮುಲು, ಆರ್.ಅಶೋಕ್, ಗೋವಿದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಪಕ್ಷದ ನಾಯಕರು ವಿಧಾನಸೌಧ ಸಮ್ಮೇಳನ ಸಭಾಂಗಣದ ಪತ್ರಿಕಾಗೋಷ್ಠಿಗೆ ಹಾಜರಾಗಿರಲಿಲ್ಲ. ಮೆಟ್ಟಿಲು ಮುಟ್ಟಿ ನಮಸ್ಕರಿಸಿದ ಬಿಎಸ್‌ವೈ
ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದ ಯಡಿಯೂರಪ್ಪ, ವಿಧಾನಸೌಧ ದ್ವಾರದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳ ಪ್ರವೇಶಿಸಿದರು. ನಂತರ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಯವರ ಕಚೇರಿಯಲ್ಲೂ ಪೂಜೆ ಸಲ್ಲಿಸಿ ಪೂರ್ವಾಭಿಮುಖವಾಗಿ ಆಸೀನರಾದರು. ಸಿದ್ದರಾಮಯ್ಯ ಅವರು ದಕ್ಷಿಣಾಭಿಮುಖವಾಗಿ ಆಸೀನರಾಗುತ್ತಿದ್ದರು. ಸಿದ್ದರಾಮಯ್ಯ ಅವರು ತೆಗೆಸಿದ್ದ ಪಶ್ಚಿಮದ್ವಾರವನ್ನು ಬಿಎಸ್‌ವೈ ಮುಚ್ಚಿಸಿದರು. ಜ್ಯೋತಿಷಿ ಸಲಹೆ
ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಮಾಣ ವಚನ ಸ್ವೀಕರಿಸುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದರು. ಅದರಂತೆ ಬೆಳಗ್ಗೆ ಸಂಜಯನಗರದ ರಾಧಾಕೃಷ್ಣ ದೇಗುಲದಲ್ಲಿ ಪೂಜೆ ಸಲ್ಲಿಸಿ ರಾಜಭವನಕ್ಕೆ ಆಗಮಿಸಿ ಶುಭ ಮಿಥುನ ಲಗ್ನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪಂಚಮದಲ್ಲಿ ಗುರು ದೃಷ್ಟಿ ಇರುವುದರಿಂದ ಒಳ್ಳೆಯದಾಗಲಿದೆ. ಪ್ರಮಾಣ ವಚನ ನಂತರ ಗುರುಗಳ ದರ್ಶನ ಮಾಡಿ ಎಂದು ಎಂದು ಜ್ಯೋತಿಷಿ ಸಲಹೆ ನೀಡಿದ್ದರು. ಹೀಗಾಗಿಯೇ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿದರು ಎಂದು ಹೇಳಲಾಗಿದೆ. ಲಕ್ಕಿ ಕಾರ್ ಬಳಕೆ
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಹೊಸ ಕಾರು ಬದಲು 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಳಕೆ ಮಾಡುತ್ತಿದ್ದ ಹೋಂಡಾ ಸಿಆರ್‌ವಿ ಕಾರನ್ನೇ ಹತ್ತಿದರು. ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ತಾವು ಬಳಸುತ್ತಿದ್ದ ಕಾರು ಎಲ್ಲಿದೆ ಹುಡುಕಿ ಎಂದು ಹೇಳಿ ಅದೇ ಕಾರು ತರಿಸಿಕೊಂಡರು. ಅದು ಯಡಿಯೂರಪ್ಪ ಅವರಿಗೆ ಲಕ್ಕಿ ಕಾರ್ ಆಗಿತ್ತು ಎಂದು ತಿಳಿದುಬಂದಿದೆ. ಆತ್ಮಸಾಕ್ಷಿ ಮತ ಮನವಿ ಯಾಕೆ?
ಹಿಂದೊಮ್ಮೆ ಇಂದಿರಾಗಾಂಧಿಯವರು ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಆತ್ಮಸಾಕ್ಷಿ ಮತಕ್ಕೆ ಕರೆ ನೀಡಿದ್ದರು. ಆಗ, ಅವರ ಕರೆಗೆ ಯಶಸ್ಸು ಸಿಕ್ಕಿತ್ತು. ಅದೇ ರೀತಿ ಇಂದು ನಾನು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕ ಸ್ನೇಹಿತರಿಗೆ ಆತ್ಮಸಾಕ್ಷಿ ಮತ ನೀಡುವಂತೆ ಕೋರುತ್ತೇನೆ ಎಂದರು. ರಾಜಕೀಯವಾಗಿ ಇದು ತಂತ್ರಗಾರಿಕೆ ಎಂದೇ ಹೇಳಲಾಗುತ್ತಿದೆ. ಆಪರೇಷನ್ ಕಮಲ ಮೂಲಕ ಬಿಜೆಪಿ ಶಾಸಕರ ಖರೀದಿಗೆ ಮುಂದಾಗಿದೆ. ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಕಾಂಗ್ರೆಸ್-ಬಿಜೆಪಿ ಆರೋಪ ಮಾಡಿರುವುದರಿಂದ “ಆತ್ಮಸಾಕ್ಷಿ’ ಮತ ಹೆಸರಿನಲ್ಲಿ ಶಾಸಕರನ್ನು ಸೆಳೆದು ತಿರುಗೇಟು ನೀಡಲು ಬಿಜೆಪಿ ಕಾರ್ಯಕರ್ತಂತ್ರ ರೂಪಿಸಿದೆ. ಹೀಗಾಗಿಯೇ ಯಡಿಯೂರಪ್ಪ ಆತ್ಮಸಾಕ್ಷಿ ಮತ ನೀಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದೇ ನಿರ್ಣಯ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಯಡಿಯೂರಪ್ಪ ಆವರು ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಿ 14ನೇ ವಿಧಾನಸಭೆ ವಿಸರ್ಜಿಸುವ ಒಂದು ಸಾಲಿನ ನಿರ್ಣಯ ಮಾತ್ರ ತೆಗೆದುಕೊಂಡರು. ನಂತರ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜತೆ ಸಮಾಲೋಚನೆ ನಡೆಸಿ ಕಾನೂನು ಸುವ್ಯವಸ್ಥೆ, ಆರ್ಥಿಕ ಸ್ಥಿತಿಗತಿ, ಇಲಾಖಾವಾರು ಮುಖ್ಯಸ್ಥರ ಬಗ್ಗೆ ಮಾಹಿತಿ ಪಡೆದುಕೊಂಡರು. ರೈತರು, ದೇವರ ಹೆಸರಲ್ಲಿ ಪ್ರಮಾಣ ವಚನ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ವಜೂಬಾಯ್ ವಾಲಾ ಯಡಿಯೂರಪ್ಪ ಅವರಿಗೆ ಪ್ರಮಾಣ ಬೋಧಿಸಿದರು. ಹಸಿರು ಶಾಲು ಹಾಕಿಕೊಂಡು ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಯಡಿಯೂರಪ್ಪ ವಿಜಯದ ಸಂಕೇತ ಬೀರಿದರು. ಬಿಎಸ್‌ವೈ ದಿನಚರಿ ಹೀಗಿತ್ತು
* ಬೆಳಗ್ಗೆ ದೇವಾಲಯದಲ್ಲಿ ಪೂಜೆ
* ರಾಜಭವನದಲ್ಲಿ ಪ್ರಮಾಣ ವಚನ
* ವಿಧಾನಸೌಧಕ್ಕೆ ಆಗಮನ
* ಮುಖ್ಯಮಂತ್ರಿ ಕಚೇರಿಯಲ್ಲಿ ಪೂಜೆ
* ಮುಖ್ಯ ಕಾರ್ಯದರ್ಶಿ ಜತೆ ಸಭೆ
* ಕಾನೂನು ಸುವ್ಯವಸ್ಥೆ, ಅಧಿಕಾರಿಗಳ ಬಗ್ಗೆ ಮಾಹಿತಿ
* ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ
* ಬಿಜೆಪಿ ಕಚೇರಿಯಲ್ಲಿ ಮುಖಂಡರ ಜತೆ ಸಮಾಲೋಚನೆ
* ಸಿದ್ಧಗಂಗಾ ಮಠಕ್ಕೆ ಭೇಟಿ ಶ್ರೀಗಳ ಆಶೀರ್ವಾದ
* ಆರ್‌ಎಸ್‌ಎಸ್ ಕಚೇರಿಗೆ ಭೇಟಿ, ಮುಖಂಡರ ಜತೆ ಚರ್ಚೆ