Advertisement

ಶಿಕ್ಷಕರ ವರ್ಗಾವಣೆ ಅಧಿನಿಯಮಕ್ಕೆ ಗೌರ್ನರ್‌ ಅಂಕಿತ

12:30 AM Mar 20, 2019 | Team Udayavani |

ಬೆಂಗಳೂರು: ಆಡಳಿತ ಪಕ್ಷದ ಸದಸ್ಯರ ತೀವ್ರ ವಿರೋಧಕ್ಕೆ ಒಳಗಾಗಿದ್ದ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿರುವ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಅಧಿನಿಯಮ 2018ಕ್ಕೆ ರಾಜ್ಯಪಾಲ ರಿಂದ ಒಪ್ಪಿಗೆ ಪಡೆಯಲು ಸರ್ಕಾರ ಯಶಸ್ವಿಯಾಗಿದೆ.

Advertisement

ವರ್ಗಾವಣೆ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಲ್ಲಿ ತುಂಬುವ ಅಗತ್ಯವಿರುವ ಒಂದು ಸ್ಥಳವನ್ನು ಯಾವೊಬ್ಬ ಶಿಕ್ಷಕನೂ ಆಯ್ಕೆ ಮಾಡಿಕೊಳ್ಳದೇ ಇದ್ದಾಗ ಸರ್ಕಾರವೇ ಇದನ್ನು ಭರ್ತಿ ಮಾಡಲಿದೆ ಎಂಬ ಪ್ರಮುಖಾಂಶ ಸಹಿತವಾದ ತಿದ್ದುಪಡಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ವರ್ಗಾವಣೆ ಪ್ರಕ್ರಿಯೆಗೆ ಬೇಕಾದ ಮಾರ್ಗಸೂಚಿ ಇಲಾಖೆಯಿಂದ ಹೊರಡಿಸುವ ಸಾಧ್ಯತೆ ಇದೆ.

ಆಡಳಿತ ಪಕ್ಷದಿಂದಲೇ ವಿರೋಧ ವ್ಯಕ್ತವಾಗಿತ್ತು: ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ)ವಿಧೇಯಕ-2018ಕ್ಕೆ ಫೆಬ್ರವರಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧದ ವ್ಯಕ್ತಪಡಿಸಿದ್ದರು. ಆದರೂ, ಉಭಯ ಸದನಗಳಲ್ಲೂ ಅಂಗೀಕಾರಗೊಂಡಿತ್ತು.

ಮಾರ್ಗಸೂಚಿ ನಿಯಮದ ನಂತರ ಮತ್ತಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಈ ತಿದ್ದುಪಡಿ ಭ್ರಷ್ಟಾಚಾರಕ್ಕೆ ನೇರ ಅವಕಾಶ ಮಾಡಿಕೊಡುತ್ತದೆ. ಬಲಿಷ್ಠ ಶಿಕ್ಷಕರು ಸುಲಭದಲ್ಲಿ ವರ್ಗಾವಣೆ ಪಡೆಯಲಿದ್ದಾರೆ. ಈ ಹುದ್ದೆಯ ವರ್ಗಾವಣೆಗಾಗಿಯೇ ದಲ್ಲಾಳಿಗಳು ಹುಟ್ಟಿಕೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್‌ ನಲ್ಲಿ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು

ಪ್ರಮುಖ ತಿದ್ದುಪಡಿ
ಶಿಕ್ಷಕರು ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಇದ್ದ ಕನಿಷ್ಠ ಸೇವಾವಧಿಯನ್ನು 5 ವರ್ಷದಿಂದ 3 ರ್ಷಕ್ಕೆಇಳಿಸಲಾಗಿದೆ. ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು ನಗರ ಪ್ರದೇಶದ ವ್ಯಾಪ್ತಿಯೊಳಗೆ ಸೇರುವುದಿಲ್ಲ. ಎ ವಲಯ(ನಗರ ಪ್ರದೇಶ)ದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸಿ ವಲಯ(ಗ್ರಾಮೀಣ ಪ್ರದೇಶ)ಕ್ಕೆ ಶೇ.5ರಷ್ಟು ಮಿತಿಯಲ್ಲಿ ಕಡ್ಡಾಯವರ್ಗಾವಣೆ ಮಾಡಲಾಗಿದೆ. ಒಬ್ಬ ಶಿಕ್ಷಕ ಅಥವಾ ಆ ಶಿಕ್ಷಕ ದಂಪತಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಮತ್ತು ಅದಕ್ಕೆ ವೈದ್ಯಕೀಯ ಚಿಕಿತ್ಸೆ ದೊರೆಯದಿದ್ದಲ್ಲಿ, ದಂಪತಿ ಶಿಕ್ಷಕರ ವರ್ಗಾವಣೆಗಾಗಿ ಒಂದೇ ಸ್ಥಳದಲ್ಲಿ ನಿಯೋಜಿಸಲು ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುತ್ತದೆ. ದಂಪತಿ ಶಿಕ್ಷಕರಲ್ಲಿ ಯಾರಾದರು ಒಬ್ಬರು ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ಆ ಪ್ರದೇಶಕ್ಕೆ ವರ್ಗಾವಣೆ ಮಾಡಲು ತಿದ್ದುಪಡಿ ತರಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next