Advertisement

Governer ಕೇಂದ್ರ ಸರ್ಕಾರದ ಕೈಗೊಂಬೆ, ನಾನು ರಾಜೀನಾಮೆ ನೀಡಲ್ಲ: ಸಿಎಂ ಸಿದ್ದರಾಮಯ್ಯ

06:44 PM Aug 17, 2024 | Team Udayavani |

ಬೆಂಗಳೂರು:  ಮುಡಾ ಹಗರಣ ಸಂಬಂಧಿಸಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆ ಸಂವಿಧಾನಬಾಹಿರ, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಇದೊಂದು ರಾಜಕೀಯ ಪಿತೂರಿ, ಈ ವಿಚಾರದಲ್ಲಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯ‌ಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

Advertisement

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ  ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಅವರ ನಿರ್ಣಯ ಚುನಾಯಿತ ಸರ್ಕಾರ ಅಭದ್ರಗೊಳಿಸುವ ಷಡ್ಯಂತ್ರವಾಗಿದೆ. ನಮ್ಮ ಸರ್ಕಾರ ಅಭದ್ರಗೊಳಿಸುವ ದೊಡ್ಡ ಷಡ್ಯಂತ್ರದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಪಾಲುದಾರರು. ಉತ್ತರಾಖಂಡ, ಜಾರ್ಖಂಡ್, ದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಷಡ್ಯಂತ್ರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.

ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ, ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದ್ದು, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು. ನನ್ನ ವಿರುದ್ಧ ದೂರು ಬಂದ ದಿನವೇ ಶೋಕಾಸ್ ನೋಟಿಸ್ ನೀಡಲಾಗಿತ್ತು. ರಾಜ್ಯಪಾಲರ ಈ ನಡೆಯನ್ನು ನಿರೀಕ್ಷಿಸಲಾಗಿತ್ತು. ಶಾಸಕರು, ಸಂಪುಟ ಸಚಿವರು, ಪಕ್ಷದ ವರಿಷ್ಠರೆಲ್ಲರೂ ನನ್ನ ಪರವಾಗಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಯಶಸ್ಸು ಸಹಿಸಲಾಗುತ್ತಿಲ್ಲ:
ಕೇಂದ್ರ ಸರಕಾರವು ರಾಜ್ಯಪಾಲರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೆ ನನ್ನ ರಾಜೀನಾಮೆ ಕೇಳಲು ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಿಗೆ ಸಹಿಸಲಾಗುತ್ತಿಲ್ಲ . ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧವಾಗಿದೆ . ಬಿಜೆಪಿಯವರ ಈ ನಿಲುವಿಗೆ ಈಗ ಜೆಡಿಎಸ್ ನವರೂ ಬೆಂಬಲ ನೀಡಿದ್ದಾರೆ.


ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ  ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿಯವರ ವಿರುದ್ಧ ದೂರು ನೀಡಲಾಗಿದ್ದರೂ, ಈ ವರೆಗೆ ಯಾವುದೇ ಕ್ರಮವಾಗಿಲ್ಲ. ನವೆಂಬರ್ ನಲ್ಲಿಎಚ್.ಡಿ. ಕುಮಾರಸ್ವಾಮಿಯವರ ಮೇಲೆ ಅನಧಿಕೃತ ಗಣಿಗಾರಿಕೆಗೆ ಪರವಾನಗಿ ನೀಡಿರುವ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಅನುಮತಿ ಕೋರಿದ್ದರೂ ರಾಜ್ಯಪಾಲರಿಂದ ಯಾವುದೇ ಕ್ರಮವಾಗಿಲ್ಲ ಎಂದು ಟೀಕಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next