Advertisement

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

03:46 AM Dec 23, 2024 | Team Udayavani |

ಹುಬ್ಬಳ್ಳಿ: ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಅಕ್ರಮವಾಗಿ ಬಂಧಿಸಿ ಅಲ್ಲಲ್ಲಿ ಸುತ್ತಾಡಿಸಿ ಗದ್ದೆ, ಕಲ್ಲುಕೋರೆ, ಅರಣ್ಯ ಪ್ರದೇಶದ ರಸ್ತೆಗಳಲ್ಲಿ ನಿಲ್ಲಿಸಿದ್ದರ ಹಿಂದೆ “ನಕಲಿ ಎನ್‌ಕೌಂಟರ್‌’ ನಡೆ ಸುವ ಹುನ್ನಾರವಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನು ಕೊಲ್ಲುವ ಸಂಚು ನಡೆದಿತ್ತು ಎಂದು ಸಿ.ಟಿ. ರವಿ ಅವರೇ ಹೇಳಿದ್ದಾರೆ.

Advertisement

ಈ ಹೇಳಿಕೆ ಜತೆಗೆ ಅವರನ್ನು ಅಲ್ಲಲ್ಲಿ ಕರೆದುಕೊಂಡು ಓಡಾಡಿಸಿದ್ದು, ನಿಲ್ಲಿಸಿದ್ದನ್ನು ಗಮನಿಸಿದರೆ ನಕಲಿ ಎನ್‌ಕೌಂಟರ್‌ ಮಾಡುವ ಉದ್ದೇಶವಿತ್ತು ಎನ್ನುವ ಅನುಮಾನ ಮೂಡುತ್ತದೆ. ಸಿ.ಟಿ. ರವಿ ಅವರಿಗೆ ಹಿಂಸೆ ನೀಡುವ ಮೂಲಕ ಬಿಜೆಪಿಯನ್ನು ಹತ್ತಿಕ್ಕಬೇಕು ಎನ್ನುವ ಕೆಲಸ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಇದೊಂದು ರಾಜಕೀಯ ದ್ವೇಷದ ಘಟನೆಯಾಗಿದೆ ಎಂದು ಆರೋಪಿಸಿದರು.

ಇದರ ವಿರುದ್ಧ ರಾಜಕೀಯ ಹೋರಾಟದ ಜತೆಗೆ ಕಾನೂನು ಹೋರಾಟವನ್ನೂ ಮಾಡುತ್ತೇವೆ. ಬೆಳಗಾವಿ ಪೊಲೀಸ್‌ ಆಯುಕ್ತ ಹಾಗೂ ಅವರ ತಂಡಕ್ಕೆ ಒಂದು ಪಾಠ ಆಗುವ ರೀತಿಯಲ್ಲಿ ಕಾನೂನು ಹೋರಾಟ ನಡೆಸುವಂತೆ ರವಿ ಅವರಿಗೆ ಸೂಚಿಸಿದ್ದೇನೆ. ಕಾನೂನುಬಾಹಿರ ಮೌಖಿಕ ಆದೇಶಗಳನ್ನು ಪಾಲನೆ ಮಾಡುವ ಅಧಿಕಾರಿಗಳಿಗೆ ಇದೊಂದು ಪಾಠವಾಗಬೇಕು. ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ದಲಿತ ಎಂಬ ಕಾರಣಕ್ಕೆ ಮಾತನಾಡಿಲ್ಲವೇ?
ಸಿ.ಟಿ. ರವಿ ಅವರನ್ನು ಖಾನಾಪುರ ಠಾಣೆಗೆ ಕರೆದುಕೊಂಡು ಹೋದದ್ದು ಯಾವ ಕಾರಣಕ್ಕೆ? ಈ ಕುರಿತು ಪೊಲೀಸ್‌ ಆಯುಕ್ತರು ಬಾಲಿಶ ಹೇಳಿಕೆ ನೀಡಿದ್ದಾರೆ. ಸಂವಿಧಾನಾತ್ಮಕ ಮಾನ್ಯತೆ ಇರುವ ವಿಪಕ್ಷ ನಾಯಕರೊಂದಿಗೆ ಪೊಲೀಸ್‌ ಆಯುಕ್ತರು ಮಾತನಾಡಿಲ್ಲ. ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದಲಿತ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣಕ್ಕೆ ಮಾತನಾಡಿಲ್ಲವೇ? ಅಗೌರವದಿಂದ ನಡೆದುಕೊಂಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಈ ಎಲ್ಲ ಪ್ರಕರಣಗಳು ಗೃಹಮಂತ್ರಿಗಳ ಗಮನಕ್ಕೆ ಬಂದಿಲ್ಲ ಎಂದಾದರೆ ಆ ಸ್ಥಾನದಲ್ಲಿ ಅವರು ಮುಂದುವರಿಯುವ ಅಗತ್ಯವಿಲ್ಲ. ರಾಜಕೀಯ ದ್ವೇಷ ಸಾಧಿಸಲು ಅಲ್ಲಿನ ಪೊಲೀಸರು ಸಾಥ್‌ ನೀಡಿದ್ದಾರೆ ಎಂದರು.

ಒಂದೇ ಪಕ್ಷದ ಸರಕಾರ ಇರುವುದಿಲ್ಲ
ವಿಧಾನಸೌಧಕ್ಕೆ ನುಗ್ಗಿದವರನ್ನು ಇದುವರೆಗೂ ಬಂಧಿಸಿಲ್ಲ. ವಿಧಾನ ಪರಿಷತ್‌ನಲ್ಲಿ ಆದ ಘಟನೆ ಕುರಿತು ಎಫ್‌ಐಆರ್‌ ದಾಖಲಿಸುವ ಅಗತ್ಯವೇನಿತ್ತು? ಸಚಿವರ ಆಪ್ತ ಸಹಾಯಕನಿಂದ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿ, ಬಂಧಿಸುವ ಕೆಲಸ ಪೊಲೀಸರಿಂದ ಆಗಿದೆ. ಒಂದೇ ಪಕ್ಷದ ಸರಕಾರ ಇರುವುದಿಲ್ಲ ಎಂಬುದನ್ನು ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಬೆಳಗಾವಿ ಪೊಲೀಸ್‌ ಆಯುಕ್ತರು ಹಾಗೂ ಕೆಲವು ಅಧಿಕಾರಿಗಳು ಕಾನೂನುಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದರು.

Advertisement

ಪ್ರಹ್ಲಾದ್‌ ಜೋಶಿ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ವಿಧಾನ ಪರಿಷತ್‌ನಲ್ಲಿ ನಡೆದ ಘಟನೆ ಎಲ್ಲರೂ ತಲೆ ತಗ್ಗಿಸು ವಂಥದ್ದು. ರವಿ ಅವ ರನ್ನು ಬಂಧಿ ಸಿದ ಮೇಲೆ ಪೊಲೀಸರು ಬೇರೆ ಬೇರೆ ಸ್ಥಳಕ್ಕೆ ಏಕೆ ಕರೆದೊಯ್ದರು ಎಂಬುದಕ್ಕೆ ಈಗಾಗಲೇ ವಿವರಣೆ ಕೊಟ್ಟಿದ್ದಾರೆ. ಹೆಬ್ಬಾಳ್ಕರ್‌ ಬೆಂಬಲಿಗರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸದ ಬಗ್ಗೆ ನನಗೆ ಮಾಹಿತಿ ಇಲ್ಲ.  ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next