Advertisement

ಕಡಬ ಅಭಿವೃದ್ಧಿಗೆ ಸರಕಾರದ ಮುನ್ನುಡಿ

10:08 PM Oct 23, 2019 | mahesh |

ಕಡಬ: ಗ್ರಾಮ ಪಂಚಾಯತ್‌ ಆಗಿರುವ ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸ ಬೇಕೆಂಬ ಬೇಡಿಕೆಗೆ ಕೊನೆಗೂ ಸರಕಾರ ಹಸುರು ನಿಶಾನೆ ತೋರಿಸಿದೆ. ತಾಲೂಕು ಕೇಂದ್ರವಾಗಿರುವ ಕಡಬವನ್ನು ಪ.ಪಂ. ಆಗಿ ಉನ್ನತೀಕರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.

Advertisement

ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಕಡಬ ಗ್ರಾ.ಪಂ.ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಬೇಕೆನ್ನುವ ಬೇಡಿಕೆ ಇಂದು ನಿನ್ನೆಯದಲ್ಲ. ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿ ಕಡಬ ತಾಲೂಕು ಘೋಷಣೆಯಾದ ಬೆನ್ನಿಗೇ ಈ ಕುರಿತು ಪ್ರಯತ್ನಗಳು ಆರಂಭವಾಗಿದ್ದವು. ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಬಹುದೆಂದು ಕಡಬ ವಿಶೇಷ ತಹಶೀಲ್ದಾರ್‌ 2013ರಲ್ಲಿಯೇ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್‌ ಸೊರಕೆ ಅವರು ಕಡಬ ಗ್ರಾ.ಪಂ.ಗೆ ಭೇಟಿ ನೀಡಿದ್ದ ವೇಳೆ ಪಂಚಾಯತ್‌ ಅಧ್ಯಕ್ಷರಾಗಿದ್ದ ಕೆ.ಎಂ. ಹನೀಫ್‌ ಅವರು ಸಚಿವರಿಗೆ ಈ ಕುರಿತು ಮನವಿ ಸಲ್ಲಿಸಿದ್ದರು. ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಪಿ.ಪಿ. ವರ್ಗೀಸ್‌ ನೇತೃತ್ವದ ಕಾಂಗ್ರೆಸ್‌ ಪ್ರಮುಖರ ನಿಯೋಗವು ಬೆಂಗಳೂರಿಗೆ ತೆರಳಿ ಸಚಿವರನ್ನು ಭೇಟಿಯಾಗಿ ಒತ್ತಡ ಹೇರಿತ್ತು. ಆದರೆ ಪಟ್ಟಣ ಪಂಚಾಯತ್‌ ಆಗಲು ಅಗತ್ಯ ಜನಸಂಖ್ಯೆ ಇಲ್ಲದೇ ಇದ್ದುದರಿಂದ ವಿಚಾರ ನನೆಗುದಿಗೆ ಬಿದ್ದಿತ್ತು. ಎರಡು ವರ್ಷಗಳ ಹಿಂದೆ ಸರಕಾರವೇ ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆ ಗೇರಿಸಲು ಪಂಚಾಯತ್‌ನಿಂದ ಪೂರಕ ಅಂಶಗಳ ವರದಿ ಕೇಳಿತ್ತು.

ಮುಖ್ಯಮಂತ್ರಿ ಭರವಸೆ
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಕಡಬವನ್ನು ತಾಲೂಕಾಗಿ ಘೋಷಣೆ ಮಾಡಿತ್ತು. ಅದನ್ನು ಅನುಷ್ಠಾನ ಮಾಡದ ಕಾಂಗ್ರೆಸ್‌ ಸರಕಾರ, ಅಧಿಕಾರಾ ವಧಿಯ ಕೊನೆಯಲ್ಲಿ ಮತ್ತೂಮ್ಮೆ ಘೋಷಣೆ ಮಾಡಿತು. ಈಗ ಅಧಿಕಾರ ಹಿಡಿದಿರುವ ಬಿಜೆಪಿ, ಕಡಬವನ್ನು ಪ.ಪಂ. ಮಾಡಲು ನಿರ್ಧರಿಸಿದೆ. ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದು ಫ‌ಲ ನೀಡಿದೆ. ಆರು ತಿಂಗಳ ಒಳಗೆ ಕಡಬ ತಾಲೂಕು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ಹಾಗೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಕಡಬ ತಾಲೂಕು ಹೋರಾಟ ಸಮಿತಿ ಸಂಚಾಲಕ ಕೃಷ್ಣ ಶೆಟ್ಟಿ ಕಡಬ ಹೇಳಿದ್ದಾರೆ.

ಅಭಿವೃದ್ಧಿಗೆ ಪೂರಕ
ತಾಲೂಕು ಅನುಷ್ಠಾನದ ಕೆಲಸಗಳು ನಡೆಯುತ್ತಿದ್ದು, ಅದೇ ಸಂದರ್ಭದಲ್ಲಿ ಗ್ರಾ.ಪಂ. ವ್ಯವಸ್ಥೆ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿರುವುದು ತಾಲೂಕಿನ ಅಭಿವೃದ್ಧಿಗೂ ಪೂರಕವಾಗಲಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳ ಒದಗಣೆಗೆ ಹೆಚ್ಚಿನ ಅನುದಾನಗಳು ಲಭಿಸಲಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ಮತ್ತು ಮುತುವರ್ಜಿಯಿಂದ ಕೆಲಸ ನಿರ್ವಹಿಸಿದಲ್ಲಿ ಕಡಬವು ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಕಾಣಲಿದೆ.

ಹೆಚ್ಚು ಅನುದಾನ ಲಭ್ಯವಾಗಲಿದೆ
ತಾಲೂಕು ಕೇಂದ್ರಗಳಲ್ಲಿರುವ ಗ್ರಾ.ಪಂ.ಗಳನ್ನು ಮೇಲ್ದಜೇìಗೇರಿಸುವ ಪ್ರಸ್ತಾವ ಸರಕಾರದ ಮುಂದಿತ್ತು. ಇದೀಗ ನೂತನ ತಾಲೂಕು ಕೇಂದ್ರವಾಗಿರುವ ಕಡಬವನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದಜೇìಗೇರಿಸುವ ಕುರಿತು ರಾಜ್ಯ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ಕಡಬ ಪಟ್ಟಣ ಪಂಚಾಯತ್‌ ಆಗುವುದರಿಂದ ಸರಕಾರದಿಂದ ಹೆಚ್ಚು ಅನುದಾನ ಲಭ್ಯವಾಗಲಿದೆ. ಈ ಹಿಂದೆ ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಕಡಬ ತಾಲೂಕು ಘೋಷಣೆಯಾಗಿತ್ತು. ಪ್ರಸ್ತುತ ರಾಜ್ಯ ಬಿಜೆಪಿ ಸರಕಾರ ಪೂರ್ಣ ಪ್ರಮಾಣದಲ್ಲಿ ಹೊಸ ತಾಲೂಕುಗಳ ಅನುಷ್ಠಾನಕ್ಕೆ ಮುಂದಾಗಿದೆ. ಇನ್ನು 6 ತಿಂಗಳಲ್ಲಿ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಕಡಬದಲ್ಲಿ ತೆರೆದುಕೊಳ್ಳಲಿವೆ.
– ಎಸ್‌. ಅಂಗಾರ, ಶಾಸಕ, ಸುಳ್ಯ

Advertisement

ಕಾಂಗ್ರೆಸ್‌ ಪ್ರಯತ್ನಿಸಿತ್ತು
ಕಡಬ ಪಟ್ಟಣ ಪಂಚಾಯತ್‌ ಆಗುವಲ್ಲಿ ಕಾಂಗ್ರೆಸ್‌ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈ ಹಿಂದೆ ವಿನಯ ಕುಮಾರ್‌ ಸೊರಕೆಯವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಕಡಬ ಗ್ರಾ.ಪಂ.ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸರಕಾರ, ಪೂರಕ ವರದಿ ನೀಡುವಂತೆ ಕೇಳಿತ್ತು. ಆದರೆ ಜನಸಂಖ್ಯೆ ಕಡಿಮೆ ಇದೆ ಎನ್ನುವ ಹಿನ್ನೆಲೆಯಲ್ಲಿ ಬೇಡಿಕೆ ಈಡೇರಲಿಲ್ಲ. ಈಗ ಪ.ಪಂ. ರೂಪುಗೊಳಿಸಲು ಬೇಕಾಗುವಷ್ಟು ಜನಸಂಖ್ಯೆ ಇದೆ. ಈಗಿನ ಸರಕಾರ ಜನಸಂಖ್ಯೆ ಆಧಾರದಲ್ಲಿ ಪಟ್ಟಣ ಪಂಚಾಯತ್‌ ಮಾಡುವುದಕ್ಕೆ ನಿರ್ಧಾರ ಕೈಗೊಂಡಿರುವುದು ಅಭಿನಂದನೀಯ.
– ಪಿ.ಪಿ. ವರ್ಗೀಸ್‌, ಜಿ.ಪಂ. ಸದಸ್ಯರು, ಕಡಬ ಕ್ಷೇತ್ರ

ಕಡಬ ಗ್ರಾಮ ಪಂಚಾಯತ್‌ ಕಚೇರಿ.

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next