Advertisement

ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲ: ಪ್ರಿಯಾಂಕ್‌

01:08 PM Apr 14, 2022 | Team Udayavani |

ಚಿತ್ತಾಪುರ: ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ತಾಲೂಕಿನ ಅಲ್ಲೂರು (ಕೆ) ಗ್ರಾಮದಲ್ಲಿ 155.70 ಲಕ್ಷ ರೂ. ವೆಚ್ಚದಲ್ಲಿ ಜಲಜೀವನ ಮಿಷನ್‌ ಅಡಿಯಲ್ಲಿ ಮನೆಮನೆಗೆ ನಳ ಸಂಪರ್ಕ ಕಲ್ಪಿಸುವ ಯೋಜನೆಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಮನೆ ಮನೆಗೆ ನಳದ ನೀರಿನ ಸಂಪರ್ಕ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಆಯುಷ್ಯಮಾನ್‌ ಭಾರತ್‌ ಯೋಜನೆಯಲ್ಲಿ ಶೇ. 50, ಜನಜೀವನ ಮಿಷನ್‌ ಅಡಿಯಲ್ಲಿ ಶೇ.40 ರಾಜ್ಯದ ಪಾಲಿದೆ. ಆದರೆ, ರಾಜ್ಯ ಹಾಗೂ ಕೇಂದ್ರದ ಪಾಲಿನ ಯೋಜನೆಗಳಿಗೆ ಕೇವಲ ಕೇಂದ್ರದ ಹೆಸರು ಇಡುವ ಮೂಲಕ ಬಿಜೆಪಿ ಸರ್ಕಾರ ರಾಜ್ಯಕ್ಕೆ ತಪ್ಪು ಸಂದೇಶ ರವಾನಿಸಿದೆ. ರಾಜ್ಯದ ತೆರಿಗೆ ಹಣವನ್ನು ಇಲ್ಲಿಯ ಅಭಿವೃದ್ದಿಗೆ ಬಳಸದೇ ಉತ್ತರ ಪ್ರದೇಶದಲ್ಲಿ ಬಳಸಲಾಗುತ್ತದೆ ಎಂದು ಆಪಾದಿಸಿದರು.

ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಒಂದೇ ಒಂದು ಹುದ್ದೆ ತುಂಬಿಲ್ಲ. ದೇಶದಲ್ಲಿಯೇ ಕರ್ನಾಟಕ ಅತ್ಯಂತ ಭ್ರಷ್ಟ ರಾಜ್ಯವಾಗಿದೆ. ಇದಕ್ಕೆ ಆಡಳಿತದಲ್ಲಿರುವ ಬಿಜೆಪಿಯೇ ನೇರ ಹೊಣೆಯಾಗುತ್ತದೆ. ಬಿಜೆಪಿ ಶಾಸಕರು ತಮಗೆ ಬರುವ ಪರ್ಶೇಂಟೇಜ್‌ ಬರದೇ ಹೋದರೆ ಕಾಮಗಾರಿಗೆ ಚಾಲನೆ ನೀಡೋಲ್ಲ. ಇದು ಅವರ ಜನಪರ ಕಾಳಜಿಗೆ ಉದಾಹರಣೆ. ಈ ಬಗ್ಗೆ ಬಿಜೆಪಿಯ ಎಚ್‌. ವಿಶ್ವನಾಥ, ಬಸವನಗೌಡ ಪಾಟೀಲ ಯತ್ನಾಳ ಬಹಿರಂಗವಾಗಿಯೇ ಟೀಕಿಸಿದ್ದಾರೆ ಎಂದರು.

ಮಾಜಿ ಜಿಪಂ ಸದಸ್ಯ ರಮೇಶ ಮರಗೋಳ ಮಾತನಾಡಿ, ಬಿಜೆಪಿ ಸರ್ಕಾರ ಧರ್ಮಗಳ ನಡುವೆ ಜಗಳ ಹಚ್ಚುವ ಕೆಲಸ ನಡೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಆಳುವವರಿಗೆ ಜನರ ಬಗ್ಗೆ ಕಾಳಜಿ ಇರಬೇಕು, ಆರ್ಥಿಕ ಅಭಿವೃದ್ದಿಗೆ ಒತ್ತು ನೀಡಬೇಕು. ಆದರೆ ಪ್ರಸ್ತುತವಾಗಿ ರಾಜ್ಯದಲ್ಲಿ ಇದು ನಡೆಯುತ್ತಿಲ್ಲ ಎಂದರು.

Advertisement

ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ಪಾಟೀಲ ರಾಮತೀರ್ಥ, ಭೀಮಣ್ಣ ಸಾಲಿ, ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಪಾಟೀಲ, ವಕೀಲರಾದ ಶಂಕರ, ಶಿವರುದ್ರ ಭೀಣಿ, ದೇವಿಂದ್ರಪ್ಪ ಗಮಗ, ಪಿಡಿಒ ಅನಿಲಕುಮಾರ ಪಾಟೀಲ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next