ಬೆಂಗಳೂರು: ದೇವಿಕಾರಾಣಿ ರೋರಿಚ್ ಎಸ್ಟೇಟ್‌ನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳ ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ಬೆಂಗಳೂರಿನಲ್ಲೇ ಬೇರೆ ಸ್ಥಳದಲ್ಲಿ ಉತ್ಕೃಷ್ಟ ಮಟ್ಟದ ಫಿಲಂ ಸಿಟಿ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ.
ತೀವ್ರ ವಿರೋಧದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಡೆಗೂ ಫಿಲಂ ಸಿಟಿ ಸ್ಥಳವನ್ನು ಬದಲಾಯಿಸಿದ್ದು, ಬೆಂಗಳೂರಿನಲ್ಲಿ ಬೇರೆ ಸ್ಥಳ ಗುರುತಿಸಿ ಫಿಲಂ ಸಿಟಿ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಬುಧವಾರ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಬಂಧ ಪಟ್ಟ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.
ಫಿಲಂ ಸಿಟಿ, ರೋರಿಚ್ ಆರ್ಟ್ ಅಂಡ್ ಕ್ರಾಫ್ಟ್ ಮ್ಯೂಸಿಯಂ ಸ್ಥಾಪನೆ ಕುರಿತ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇವಿಕಾರಾಣಿ ರೋರಿಚ್ ಎಸ್ಟೇಟ್ ಸಿನಿಮಾ, ಕಲೆ, ಸಂಸ್ಕೃತಿ, ಅಧ್ಯಾತ್ಮ, ಪ್ರಕೃತಿ ಸೌಂದರ್ಯವನ್ನು ಒಳಗೊಂಡ ಅದ್ಭುತ ತಾಣ. ಹಾಗಾಗಿ ಅಲ್ಲಿಯೇ ಆರ್ಟ್ ಆ್ಯಂಡ್ ಕ್ರಾಫ್ಟ್ ವಿಲೇಜ್ ಸ್ಥಾಪಿಸಲು ನಿರ್ಧರಿಸಲಾಗಿದೆ. ರೋರಿಚ್ ಎಸ್ಟೇಟ್‌ನ್ನು ಇಡೀ ದೇಶವೇ ಹೆಮ್ಮೆಪಡುವಂತಹ ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಫಿಲಂ ಸಿಟಿ ಸ್ಥಾಪಿಸಲು ಜಾಗ ಗುರುತಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅವರ ಒಪ್ಪಿಗೆ ಪಡೆದ ಬಳಿಕ ಸ್ಥಳ ನಿಗದಿ ಪಡಿಸಲಾಗುತ್ತದೆ. ವಿಭಿನ್ನ ಹಾಗೂ ವಿಶಿಷ್ಟವಾದ ಫಿಲಂ ಸಿಟಿ ಸ್ಥಾಪನೆ ಸರ್ಕಾರದ ಕನಸು. ಅನಿಮೇಷನ್ ಕೇಂದ್ರ, ಚಿತ್ರ ನಿರ್ಮಾಣ ಹಾಗೂ ನಿರ್ಮಾಣದ ನಂತರ ಪ್ರಕ್ರಿಯೆಗಳಿಗೆ ಅನುಕೂಲ ವಾಗು ವಂತಹ ಚಿತ್ರನಗರಿ ಸ್ಥಾಪಿಸಬೇಕು. ಪ್ರವಾಸೋದ್ಯಮಕ್ಕೂ ಪೂರಕವಾಗಿರುವಂಥ ಈ ಫಿಲಂ ಸಿಟಿ ಹೇಗಿರಬೇಕು, ಅದರ ವಿಸ್ತೀರ್ಣ ಎಷ್ಟಿರಬೇಕು ಎಂಬ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರ ಈ ಬಗ್ಗೆ ಪೂರ್ಣ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರಿನಿಂದ ಬೆಂಗಳೂರಿಗೆ ಫಿಲಂ ಸಿಟಿ ಸ್ಥಳಾಂತರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಬೆಂಗಳೂರು ನಗರ ವಿಶ್ವಕ್ಕೆ ಅನಿಮೇಷನ್ ಕೊಟ್ಟಿದೆ. ಲಯನ್ ಕಿಂಗ್, ಅವತಾರ್ ನಂತಹ ಚಿತ್ರಗಳ ಅನಿಮೇಷನ್ ಬೆಂಗಳೂರಿನಲ್ಲೇ ಆಗಿದೆ. ಯಾವುದೇ ಒಂದೆರಡು ವಿಷಯಕ್ಕೆ ಸೀಮಿತವಾಗಿರದೇ ಎಲ್ಲವನ್ನು ಒಳಗೊಂಡಂತಹ ಅತ್ಯುತ್ತಮವಾದ ಫಿಲಂ ಸಿಟಿ ನಿರ್ಮಾಣ ಆಗಬೇಕು ಎಂಬುದಷ್ಟೇ ನಮ್ಮ ಗುರಿ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೈಸೂರಿನಲ್ಲಿ ಚಿತ್ರನಗರಿ ಮಾಡಲು ತೀರ್ಮಾನಿಸಿ ಜಮೀನು ಮಂಜೂರು ಮಾಡಿದ್ದರು. ನಂತರ ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಚಿತ್ರನಗರಿಯನ್ನು ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಿ, ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.
ಮೈತ್ರಿ ಸರ್ಕಾರ ಮಧ್ಯಂತರ ಅವಧಿಯಲ್ಲಿಯೇ ಪತನ ಹೊಂದಿದ್ದರಿಂದ ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಫಿಲಂಂ ಸಿಟಿಯನ್ನು ಐತಿಹಾಸಿಕ ರೋರಿಚ್ ಎಸ್ಟೇಟ್‌ನಲ್ಲಿ ಮಾಡಲಾಗುವುದು ಎಂದು ಘೋಷಣೆ ಮಾಡಲಾಯಿತು. ಆದರೆ, ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅಲ್ಲದೇ ಈ ಸ್ಥಳದಲ್ಲಿ ಆನೆ ಕಾರಿಡಾರ್ ಇರುವುದರಿಂದ ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಬಾರದು ಎಂದು ಪರಿಸರವಾದಿಗಳು ಆಗ್ರಹಿಸಿದ್ದರು.