ಮಂಡ್ಯ: ಮೈಷುಗರ್ ಕಾರ್ಖಾನೆಯನ್ನು ಖಾಸಗೀಯವರಿಗೆ ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಮೈಷುಗರ್ ಕಾರ್ಖಾನೆಅಧ್ಯಕ್ಷಜೆ.ಶಿವಲಿಂಗೇಗೌಡ ಹೇಳಿದರು.
ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಮಂಡ್ಯದ ಮೈಷುಗರ್ ಕಾರ್ಖಾನೆಗೆ ಆಗಮಿಸಿದ ಅವರು, ಕಚೇರಿಯಲ್ಲಿ ಅಧಕಾರ ಸ್ವೀಕರಿಸಿ ಅಧಿಕಾರಿಗಳು ಹಾಗೂ ನೌಕರರ ಜೊತೆ ಸಮಾಲೋಚನೆ ನಡೆಸಿದರು.
ಮುಖ್ಯಮಂತ್ರಿಗೆ ಕಾಳಜಿ: ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರಿಗೆ ಜಿಲ್ಲೆಯ ಮೇಲೆ ಕಾಳಜಿ ಇದೆ. ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಾರೆ. ಒ ಆ್ಯಂಡ್ ಎಂ ಬಿಟ್ಟು, ಗುತ್ತಿಗೆ ನೀಡಲು ನಿರ್ಧರಿಸಿದೆ. ಅದರಂತೆ ಟೆಂಡರ್ ಕರೆ ಯುವ ಪ್ರಕ್ರಿಯೆಗಳು ನಡೆಯುತ್ತಿವೆ. ಮುಂದಿನ ಸಾಲಿನಲ್ಲಿ ಕಬ್ಬು ಅರೆಯಲು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ರೈತರು ಧೃತಿಗೆಡಬಾರದು ಎಂದು ಹೇಳಿದರು.
ರೈತರ ನಡುವಿನ ಸೇತುವೆಯಂತೆ ಕೆಲಸ: ಈಗಾಗಲೇ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಖಾಸಗಿಗೆ ಗುತ್ತಿಗೆ ನೀಡುವ ಕಬ್ಬು ಅರೆಯಲು ಪ್ರಾರಂಭಿಸಿರುವುದರಿಂದ ಆ ಭಾಗದ ರೈತರು ಖುಷಿಯಲ್ಲಿದ್ದಾರೆ. ಅದರಂತೆ ಮೈಷುಗರ್ ಕಾರ್ಖಾನೆಯನ್ನು ಗುತ್ತಿಗೆ ನೀಡುವ ಮೂಲಕ ಆರಂಭಿಸಲಾಗುವುದು. ರೈತರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಖಾನೆ ಹಾಗೂ ರೈತರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುವೆ ಎಂದರು.
ಕಾರ್ಮಿಕರ ಹಿತ ಕಾಪಾಡಲು ಬದ್ಧ: ಕಾರ್ಖಾನೆಗೆ ಕಾಯಕಲ್ಪ ನೀಡಲುಕ್ರಮ ವಹಿಸಲಾಗುವುದು. ರೈತರ ಪಾಲಿನ ದೇವಸ್ಥಾನವಾಗಿರುವ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಕಾರ್ಮಿಕರಿಗೆ ವಿಆರ್‌ಎಸ್ ಪಡೆಯಲು ಸೂಚನೆ ನೀಡಲಾಗಿದೆ. ಅದರಂತೆ ಕೆಲವು ನೌಕರರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಉಳಿದ ಕಾರ್ಮಿಕರ ಜೊತೆ ಚರ್ಚಿಸಿ, ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕಾರ್ಮಿಕರ ಹಿತ ಕಾಪಾಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಸರ್ಕಾರದ ಪ್ರತಿನಿಧಿಯಾಗಿ ಕೆಲಸ: ಸರ್ಕಾರದ ಮಾರ್ಗ ಸೂಚಿಯಂತೆ ಕಾರ್ಯನಿರ್ವಹಿಸುತ್ತೇನೆ. ಸರ್ಕಾರ ಪ್ರತಿನಿಧಿಯಾಗಿ ರೈತರಿಗೆ ಸರ್ಕಾರದಯೋಜನೆಗಳನ್ನು ತಲುಪಿಸಲು ಮುಂದಾಗುತ್ತೇನೆ. ಯಾವ ಸಂದರ್ಭದಲ್ಲಾದರೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾಲ್ವಡಿಯವರ ಉದ್ದೇಶ ಈಡೇರಿಸಲುಕಟಿಬದ್ಧನಾಗಿದ್ದೇನೆ ಎಂದರು.
ಅಭಿನಂದನೆ: ಮೈಷುಗರ್ ಕಾರ್ಖಾನೆಗೆ ಆಗಮಿಸಿದ ನೂತನ ಅಧ್ಯಕ್ಷ ಜೆ.ಶಿವಲಿಂಗೇಗೌಡ ಅವರನ್ನು ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು, ನೌಕರರು ಅಭಿನಂದಿಸಿದರು. ಪರಿಶಿಷ್ಟ ಜಾತಿ ನೌಕರರ ಸಂಘದ ಗೌರವ ಅಧ್ಯಕ್ಷ ಎಂ.ಡಿ.ಜಯರಾಂ, ಬಿಜೆಪಿ ಕಾರ್ಯಕರ್ತರಾದ ಕೇಶವ, ಸಿದ್ದರಾಜು,ಹನಿಯಂಬಾಡಿ ನಾಗರಾಜು, ಜವರೇಗೌಡ, ನಿತ್ಯಾನಂದ ಸೇರಿದಂತೆ ಮತ್ತಿತರರಿದ್ದರು.