ಸಾಗರ : ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 7ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಪಟ್ಟಣದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.
ಹೊಸನಗರ ತಾಲ್ಲೂಕಿನ ಜಯನಗರ ಗ್ರಾಮದ 33ವರ್ಷದ ಶಶಿಕಲಾ ಕಳೆದೆರಡು ತಿಂಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಗ್ರಾಮದ ಸ್ಥಳೀಯ ಸರ್ಕಾರಿ ವೈದ್ಯರ ಸಲಹೆ ಮೇರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.
ಆಡಳಿತಾಧಿಕಾರಿ ಡಾ.ಪರಪ್ಪ ನೇತೃತ್ವದಲ್ಲಿ ಮಹಿಳೆಯ ಹೊಟ್ಟೆಯಲ್ಲಿನ ಗೆಡ್ಡೆಯ ಪರೀಕ್ಷೆ ನಡೆಸಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದರು. ಬುಧವಾರ ಮಧ್ಯಾಹ್ನ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ತಜ್ಞ ಡಾ.ನಾಗೇಂದ್ರಪ್ಪ, ಪ್ರಸೂತಿ ತಜ್ಞೆ ಡಾ.ಪ್ರತಿಮಾ, ಡಾ.ಶರ್ಮಿತಾ, ಅರವಳಿಕೆ ತಜ್ಞ ಡಾ.ಸಂಗಮ್,ಡಾ.ರಾಜೇಶ್ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿ 7 ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದಿದ್ದಾರೆ. ಈ ಸಂಧರ್ಭದಲ್ಲಿ ದಾದಿಯರಾದ ಸುವರ್ಣ, ಶ್ವೇತಾ, ಆಲಿಯ, ಚಂದ್ರು, ರಾಕೇಶ್ ಇದ್ದರು.
ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಗರ್ಭಕೋಶದಲ್ಲಿ ದೊಡ್ಡದಾದ ಗಡ್ಡೆ ಕಂಡುಬಂದಿತ್ತು. ಆಕೆಯ ಮೂತ್ರಕೋಶದ ಮೇಲೆ ಭಾರೀ ಒತ್ತಡ ಹೇರುತ್ತಿದ್ದುದರಿಂದ ಉದರ ಸಂಬಂಧಿ ನೋವು ತಂದು ಮೂತ್ರ ವಿಸರ್ಜನೆಗೂ ತೊಂದರೆ ಆಗುವ ಸಾಧ್ಯತೆಯಿತ್ತು. ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆ ಹೊರತೆಗೆದಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ’ ಎಂದು ಡಾ. ನಾಗೇಂದ್ರಪ್ಪ ತಿಳಿಸಿದರು.
ಇದನ್ನೂ ಓದಿ: ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ