Advertisement
ಪಬ್ ದಾಳಿ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕಿತ್ತು. 9 ವರ್ಷಗಳ ಕಾಲ ವಿಚಾರಣೆ ನಡೆದಿರುವುದು, ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳಾದ ಮೂವರು ಹೆಣ್ಣು ಮಕ್ಕಳು ಸಾಕ್ಷಿ ಹೇಳಲು ಬಾರದಿರುವುದು ಸಹ ತೀರ್ಪಿನ ಮೇಲೆ ಪರಿಣಾಮ ಬೀರಿತೆಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಪ್ರಾಸಿಕ್ಯೂಶನ್ ನಿರ್ದೇಶಕರಿಂದ ತರಿಸಿಕೊಂಡು ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಮೇಲ್ಮನವಿ ಸಲ್ಲಿಸಲಾಗುವುದೆಂದು ಹೇಳಿದರು.
ರಾಜ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಜಾರಿಯಲ್ಲಿರುವ ಆರ್ಡರ್ಲಿ ಪದ್ಧತಿಯನ್ನು ಡಾ| ಜಿ. ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದಾಗ ರದ್ದು ಪಡಿಸಲಾಗಿತ್ತಾದರೂ ಅದಿನ್ನೂ ಮುಂದುವರಿದಿದೆ. ಪರ್ಯಾಯ ನೇಮಕಾತಿ ಮುಗಿದ ತಕ್ಷಣ ಆರ್ಡರ್ಲಿ ವ್ಯವಸ್ಥೆ ರದ್ದುಪಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಪೊಲೀಸ್ ಅಧಿಕಾರಿ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆರ್ಡರ್ಲಿಗಳಿದ್ದರೆ ವಾಪಸ್ ಪಡೆಯಲಾಗುವುದು ಎಂದು ರಾಮಲಿಂಗಾ ರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.