ನವದೆಹಲಿ: ಆ್ಯಪ್ ಸ್ಟೋರ್ ಗಳಲ್ಲಿ ಗಿರಕಿಹೊಡೆಯುತ್ತಿರುವ ನಕಲಿ ಕೋ-ವಿನ್ ಆ್ಯಪ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕೋ-ವಿನ್ ಆ್ಯಪ್ ಇನ್ನೂ ಅಭಿವೃದ್ಧಿ ಹಂತದಲ್ಲಿ ಇರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಶೀಘ್ರದಲ್ಲಿಯೇ ಕೋ ವಿನ್ ಆ್ಯಪ್ ಆ್ಯಂಡ್ರಾಯ್ದ್ ಮತ್ತು ಐಒಎಸ್ ನಲ್ಲಿ ಬಳಕೆದಾರರಿಗೆ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ಕೋವಿಡ್ ಗೆ ಸಂಬಂಧಿಸಿದ ಕೋ ವಿನ್ ಆ್ಯಪ್ಸ್ ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಯಾವುದೇ ಕಾರಣಕ್ಕೂ ನಕಲಿ ಕೋ ವಿನ್ ಆ್ಯಪ್ಸ್ ಅನ್ನು ಡೌನ್ ಲೋಡ್ ಮಾಡಿ ಅದರಲ್ಲಿ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದಿರುವಂತೆ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಸಮಾಜಘಾತುಕ ಶಕ್ತಿಗಳು ಕಾನೂನು ಬಾಹಿರವಾಗಿ “ಕೋ ವಿನ್” ಹೆಸರಿನ ಆ್ಯಪ್ ಅನ್ನು ನಿರ್ಮಿಸಿ ಪ್ಲೇ ಸ್ಟೋರ್ ನಲ್ಲಿ ಹಾಕಿದ್ದಾರೆ. ಇಂತಹ ಕೋ ವಿನ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಡಿ. ಸರ್ಕಾರದ ಕೋವಿನ್ ಆ್ಯಪ್ ಬಿಡುಗಡೆ ಬಗ್ಗೆ #MoHFW ಅಧಿಕೃತ ಪ್ಲ್ಯಾಟ್ ಫಾರಂನಲ್ಲಿ ತಿಳಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಹಿಂಸಾಚಾರ, ಪ್ರತಿಭಟನೆ; ಕೊನೆಗೂ ಸೋಲೊಪ್ಪಿಕೊಂಡ ಟ್ರಂಪ್, ಬೈಡೆನ್ ಗೆ ಭರ್ಜರಿ ಗೆಲುವು
ವರದಿಯ ಪ್ರಕಾರ, ಕೋವಿಡ್ ಲಸಿಕೆ ಪಡೆಯುವ ವ್ಯಕ್ತಿ ತನ್ನ ಗುರುತಿನ ದಾಖಲೆಯಾದ ಆಧಾರ್, ಡ್ರೈವಿಂಗ್ ಲೈಸೆನ್ಸ್, ಪಾನ್ ಅಥವಾ ಬ್ಯಾಂಕ್ ಪಾಸ್ ಬುಕ್ ನ ದಾಖಲೆಯನ್ನು ಅಪ್ ಲೋಡ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಹೀಗೆ ರಿಜಿಸ್ಟ್ರೇಶನ್ ಆದ ನಂತರ ನಮೂದಿಸಿದ ಮೊಬೈಲ್ ಸಂಖ್ಯೆಗೆ ಕೋವಿಡ್ ಕುರಿತ ಮಾಹಿತಿ ಎಸ್ ಎಂಎಸ್ ಮೂಲಕ ಬರಲಿದೆ. ಲಸಿಕೆ ಪಡೆಯುವ ದಿನಾಂಕ, ಸ್ಥಳವನ್ನು ಕೋವಿನ್ 20 ಆ್ಯಪ್ ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.