Advertisement

ಅತಿವೃಷ್ಟಿಗೆ ಸರ್ಕಾರದ ಖಜಾನೆ ಖಾಲಿ: ಸಿಎಂ

11:35 PM Jan 13, 2020 | Lakshmi GovindaRaj |

ಜಾಲಹಳ್ಳಿ: ಭೀಕರ ಪ್ರವಾಹದಿಂದ ರಾಜ್ಯದಲ್ಲಿ ಎದುರಾದ ಅತಿವೃಷ್ಟಿಯಿಂದ ಪರಿಹಾರ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ರಾಜ್ಯ ಅಭಿವೃದ್ಧಿಯತ್ತ ಗಮನ ಹರಿಸಲು ಆಗುತ್ತಿಲ್ಲ. ಸರ್ಕಾರ ಹಣಕಾಸಿನ ಕೊರತೆ ಎದುರಿಸುತ್ತಿದ್ದು, ಮಾರ್ಚ್‌ ನಂತರ ಪರಿಸ್ಥಿತಿ ಸುಧಾರಿಸುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಕಾಗಿನೆಲೆ ಕನಕ ಗುರುಪೀಠದಲ್ಲಿ ನಡೆದ ಹಾಲುಮತ ಸಂಸ್ಕೃತಿ ವೈಭವದ ಆದಿವಾಸಿಗಳ ಸಂಸ್ಕೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಸುಮಾರು 500-600 ಮನೆಗಳು ನೆಲಸಮವಾಗಿವೆ. 5-6 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಅತಿವೃಷ್ಟಿಯಿಂದ ಆಗಿರುವ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಗಮನ ಹರಿಸಲಾಗಿದೆ. ಸದ್ಯ ಸರ್ಕಾರ ಹಣಕಾಸಿನ ಕೊರತೆ ಇದ್ದು, ಮಾರ್ಚ್‌ ನಂತರ ಪರಿಸ್ಥಿತಿ ಸುಧಾರಿಸುವ ಭರವಸೆ ಇದೆ ಎಂದು ಹೇಳಿದರು.

ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಹಾಲುಮತ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮೂಲಕ ಗುರುತಿಸಿಕೊಂಡಿದೆ. ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಹಿಂದುಳಿದ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಆದಿವಾಸಿಗಳ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಕೆ.ಆರ್‌.ನಗರ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕೇಂದ್ರ ಸಚಿವರಾದ ಫಗ್ಗನ್‌ಸಿಂಗ್‌ ಕುಲಸ್ತೆ ಅಧ್ಯಕ್ಷತೆ ವಹಿಸಿದ್ದರು. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಮಾನಪ್ಪ ವಜ್ಜಲ ಸೇರಿದಂತೆ ಇತರರು ಇದ್ದರು.

“ಮಾತು ತಪ್ಪದ ನಾಯಕ ಬಿಎಸ್‌ವೈ’
ಜಾಲಹಳ್ಳಿ/ರಾಯಚೂರು: ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕ ರಾಜ್ಯದಲ್ಲಿ ಇದ್ದರೆ ಅದು ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತ್ರ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ ಹೇಳಿದರು. ಕಾಗಿನೆಲೆ ಕನಕಗುರು ಪೀಠದಲ್ಲಿ ನಡೆಯುತ್ತಿರುವ ಹಾಲುಮತ ಸಂಸ್ಕೃತಿ ವೈಭವ-2020 ಕಾರ್ಯಕ್ರಮದ ಆದಿವಾಸಿಗಳ ಸಂಸ್ಕೃತಿ ಸಮಾವೇಶದಲ್ಲಿ ಮಾತನಾಡಿ, ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಗಳಾಗಲು ಹಾಲುಮತ ಸಮಾಜದ ಕೊಡುಗೆ ದೊಡ್ಡದಿದೆ.

Advertisement

ನಾನು ಜೆಡಿಎಸ್‌ ರಾಜ್ಯಾಧ್ಯಕ್ಷನಾಗಿ ಹಾಗೂ ಎಂಟಿಬಿ ನಾಗರಾಜ, ಭೈರತಿ ಬಸವರಾಜ, ಶಂಕರ ಮಂತ್ರಿಗಳಾಗಿದ್ದರು. ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆಗಾಗಿ ರಾಜೀನಾಮೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ನಿರೀಕ್ಷೆ ಇದೆ. ಅದನ್ನು ಅವರು ಉಳಿಸಿಕೊಳ್ಳುತ್ತಾರೆ.

ಹಾಲು ಕುರುಬ, ಜೇನುಕುರುಬ ಸೇರಿ ಇತರೆ ಹೆಸರಿನಲ್ಲಿ ಕರೆಸಿಕೊಳ್ಳುವ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ತಿಂಥಣಿಯ ಕನಕ ಗುರುಪೀಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌.ವಿಶ್ವನಾಥ, ಮುಖ್ಯಮಂತ್ರಿಗಳು ಏನೇ ಹೇಳಿದರೂ ಸಚಿವ ಸ್ಥಾನ ಕೇಳುವುದು ನಮ್ಮ ಕರ್ತವ್ಯ.

ರಾಜೀನಾಮೆ ನೀಡಿದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು. ಒಂದು ವೇಳೆ ಕೊಡದೇ ಇದ್ದರೆ ಮುಂದೆ ಕಾದು ನೋಡುತ್ತೇವೆ. ಇವತ್ತು ಸೋಮವಾರ. ನಾಳೆ, ನಾಡಿದ್ದು ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಯಡಿಯೂರಪ್ಪ ಸಿಎಂ ಆಗಲು ರಾಜೀನಾಮೆ ನೀಡಿದ 17 ಜನ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next