Advertisement

ಅನಾಥ ಮಕ್ಕಳಿಗೆ ಸರಕಾರದ ಆಸರೆ: ತಂದೆ-ತಾಯಂದಿರನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ 3,500 ರೂ.

07:19 AM May 30, 2021 | Team Udayavani |

ಕೊರೊನಾ 2ನೇ ಅಲೆ ಅದೆಷ್ಟೋ ಕುಟುಂಬಗಳನ್ನು ಕಾಡಿದೆ. ಸಾವಿರಾರು ಸಂಸಾರಗಳು ದುಡಿಯುವವರನ್ನು ಕಳೆದುಕೊಂಡಿವೆ. ಸಾವಿರಾರು ಮಕ್ಕಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಇಂಥ ಎಳೆಯರಿಗೆ ಮತ್ತು ಆದಾಯದ ಆಧಾರಸ್ತಂಭ ಕಳೆದುಕೊಂಡವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಾಯದ ಹಸ್ತ ಚಾಚಿವೆ.

Advertisement

ಬಾಲ ಸೇವಾ ಯೋಜನೆ
ಕೇಂದ್ರ ಸರಕಾರದ ಸಲಹೆಯ ಮೇರೆಗೆ ರಾಜ್ಯ ಸರಕಾರವು ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಪ್ರಕಟಿಸಿದೆ. ಈ ಮೂಲಕ ಪ್ರತೀ ತಿಂಗಳು 3,500 ರೂ. ಸಹಾಯ ಧನ ನೀಡಲಾಗುತ್ತದೆ. ಇದನ್ನು ಸಿಎಂ ಯಡಿಯೂರಪ್ಪ ಅವರೇ ಪ್ರಕಟಿಸಿದ್ದಾರೆ.
1. ಹೆತ್ತವರನ್ನು ಕಳೆದುಕೊಂಡ 10 ವರ್ಷದ ಒಳಗಿನ ಮಕ್ಕಳ ಪಾಲನೆಗೆ ಕುಟುಂಬ ಸದಸ್ಯರು ಇಲ್ಲದಿದ್ದರೆ ನೋಂದಾಯಿತ ಮಕ್ಕಳ ಪಾಲನ ಸಂಸ್ಥೆಗಳಲ್ಲಿ ದಾಖಲಿಸಿ ಆರೈಕೆ.
2. ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ.
3. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಅಥವಾ ಕೌಶಲ ಅಭಿವೃದ್ಧಿಗೆ ಲ್ಯಾಪ್‌ಟಾಪ್‌ ಯಾ ಟ್ಯಾಬ್‌.
4. 21 ವರ್ಷ ಪೂರೈಸಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ, ಮದುವೆ, ಸ್ವಯಂ ಉದ್ಯೋಗಕ್ಕೆ 1 ಲಕ್ಷ ರೂ. ಸಹಾಯ ಧನ.
5. ಅನಾಥ ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಅಥವಾ ಹಿತೈಷಿ ಒದಗಿಸಿ, ಅವರ ಮೂಲಕ ಸಹಾಯ, ಮಾರ್ಗದರ್ಶನ ಒದಗಿಸಲಾಗುತ್ತದೆ.

ಅನಾಥ ಮಕ್ಕಳಿಗೆ ಪಿಎಂ “ಕೇರ್ಸ್‌’

ದೇಶ ಮಟ್ಟದಲ್ಲೂ ಕೇಂದ್ರ ಸರಕಾರ ಅನಾಥ ಮಕ್ಕಳಿಗಾಗಿ ಯೋಜನೆ ಪ್ರಕಟಿಸಿದೆ. 18 ವರ್ಷದ ಬಳಿಕ ಮಾಸಿಕ ಸ್ಟೈಫ‌ಂಡ್‌, 23 ವರ್ಷ ತುಂಬಿದ ಬಳಿಕ 10 ಲಕ್ಷ ರೂ. ಸಹಾಯಧನ, ಉಚಿತ ಶಿಕ್ಷಣ ನೀಡುವ ಘೋಷಣೆ ಮಾಡಲಾಗಿದೆ. ಪ್ರಧಾನಮಂತ್ರಿ ಕೇರ್ಸ್‌ ಮೂಲಕವೇ ಈ ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ.

ಮಕ್ಕಳ ಹೆಸರಲ್ಲಿ ನಿಶ್ಚಿತ ಠೇವಣಿ
ಪ್ರತೀ ಅನಾಥ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ. ಈ ಮಕ್ಕಳು 18 ವರ್ಷ ಪೂರೈಸಿದ ಮೇಲೆ 23 ವರ್ಷದ ತನಕ ಪ್ರತೀ ತಿಂಗಳು ಮಾಸಿಕ ಸ್ಟೈಫ‌ಂಡ್‌ ನೀಡಲಾಗುತ್ತದೆ. ಇದನ್ನು ಅವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. 23 ವರ್ಷವಾದ ಮೇಲೆ ಒಂದೇ ಬಾರಿಗೆ 10 ಲಕ್ಷ ರೂ. ನೀಡಲಾಗುತ್ತದೆ.

Advertisement

ಉಚಿತ ಶಿಕ್ಷಣ

ಅನಾಥರಾದ ಮಕ್ಕಳಿಗೆ ಕೇಂದ್ರ ಸರಕಾರ ಸಂಪೂರ್ಣ ಉಚಿತ ಶಿಕ್ಷಣ ನೀಡಲಿದೆ. 10 ವರ್ಷದ ಒಳಗಿನ ಮಗುವನ್ನು ಹತ್ತಿರದ ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಯಲ್ಲಿ ದಾಖಲಿಸಲಾಗುತ್ತದೆ. ಖಾಸಗಿ ಶಾಲೆಗಳಿಗೆ ಪಿಎಂ ಕೇರ್ಸ್‌ ಮೂಲಕ ಆರ್‌ಟಿಇ ಅಡಿ ಹಣ ನೀಡಲಾಗುತ್ತದೆ. ಸಮವಸ್ತ್ರ, ಪಠ್ಯಪುಸ್ತಕ ಮತ್ತು ನೋಟ್‌ ಪುಸ್ತಕಗಳಿಗೂ ಪಿಎಂ ಕೇರ್ಸ್‌ನಿಂದಲೇ ಹಣ ನೀಡಲಾಗುತ್ತದೆ.

11ರಿಂದ 18 ವರ್ಷದ ಒಳಗಿನವರಿಗೆ ಕೇಂದ್ರ ಸರಕಾರದ ವಸತಿ ಶಾಲೆಗಳಲ್ಲಿ ಪ್ರವೇಶ ನೀಡಲಾಗುತ್ತದೆ. ಯಾವುದೇ ಮಗು ಪೋಷಕರು, ವಿಸ್ತರಿತ ಕುಟುಂಬ ಸದಸ್ಯರ ಜತೆಯಲ್ಲಿ ಇರಲು ಬಯಸಿದಲ್ಲಿ ಹತ್ತಿರದ ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಗಳಲ್ಲಿ ಸೇರಲು ಅವಕಾಶ ನೀಡಲಾಗುತ್ತದೆ. ಖಾಸಗಿ ಶಾಲೆಗಳಲ್ಲಿ ತಗಲುವ ಎಲ್ಲ ವೆಚ್ಚವನ್ನು ಪಿಎಂ ಕೇರ್ಸ್‌ ನಿಧಿಯಿಂದಲೇ ಭರಿಸಲಾಗುತ್ತದೆ.

ಉನ್ನತ ಶಿಕ್ಷಣಕ್ಕೆ ಸೇರುವ ಅನಾಥ ಮಕ್ಕಳಿಗೂ ಪಿಎಂ ಕೇರ್ಸ್‌ನಿಂದಲೇ ಅನುಕೂಲ ಮಾಡಿಕೊಡಲಾಗುತ್ತದೆ.

ಆರೋಗ್ಯ ವಿಮೆ
ಅನಾಥ ಮಕ್ಕಳಿಗೆ ಉಚಿತ ವಿಮೆಯನ್ನೂ ನೀಡಲಾಗುತ್ತದೆ. 18 ವರ್ಷ ತುಂಬುವ ವರೆಗೆ ಆಯುಷ್ಮಾನ್‌ ಭಾರತ್‌ ಅಡಿಯಲ್ಲಿ ವಿಮೆ ಲಭ್ಯ. ಇದರ ವಿಮಾ ಮೊತ್ತ 5 ಲಕ್ಷ ರೂ. 18 ವರ್ಷದ ವರೆಗೆ ಪ್ರೀಮಿಯಂ ಅನ್ನು ಪಿಎಂ ಕೇರ್ಸ್‌ ಮೂಲಕ ಕಟ್ಟಲಾಗುತ್ತದೆ.

ದೇಶದಲ್ಲಿ 577 ಮಕ್ಕಳು ಅನಾಥ
ಕೊರೊನಾದಿಂದ ದೇಶದಲ್ಲಿ ಒಟ್ಟು 577 ಮಕ್ಕಳು ಅನಾಥರಾಗಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸ್ಮತಿ ಇರಾನಿ ಮಾಹಿತಿ ನೀಡಿದ್ದರು. ಈ ಮಕ್ಕಳನ್ನು ನೋಡಿಕೊಳ್ಳಲು ಪ್ರತೀ ಜಿಲ್ಲೆಗೂ 10 ಲಕ್ಷ ರೂ. ನೀಡಲಾಗಿದೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next