ಹಳೆಯಂಗಡಿ: ಖಾಸಗಿ ಶಾಲೆಗಳಿಗೆ ಡೊನೇಷನ್ ಮೂಲಕ ಹಣ ಬರುವುದರಿಂದ ಸೂಟು, ಬೂಟು, ಟೈ ಹಾಕುವ ಸಂಸ್ಕೃತಿ ಇದೆ. ವಿದ್ಯಾರ್ಥಿಗಳಲ್ಲಿ ಭೇದ ಉಂಟಾಗಬಾರದು ಎಂದು ಸರಕಾರಿ ಶಾಲೆಗೆ ನೇರವಾಗಿ ಸರಕಾರವೇ ಆಸರೆಯಾಗಿ ನಿಲ್ಲುತ್ತದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಶೂ ವಿತರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಂಚಾರದಲ್ಲಿ ತೊಡಕಾಗ ಬಾರದು ಎಂದು ಸೈಕಲ್ ವಿತರಿಸುತ್ತಿದೆ. ಖಾಸಗಿ ಶಾಲೆಯ ಮಕ್ಕಳಂತೆ ಇರಬೇಕು ಎಂದು ಶೂಗಳನ್ನು ಎಲ್ಲರಿಗೂ ವಿತರಿಸುತ್ತಿದೆ. ಕನ್ನಡ ಶಾಲೆಯಲ್ಲಿನ ಶಿಕ್ಷಣದಿಂದ ಇಂದು ಅನೇಕ ಸಾಧಕರು ಉನ್ನತ ಸ್ಥಾನಮಾನವನ್ನು ಪಡೆದಿದ್ದಾರೆ ಎಂದು ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ ಅಧ್ಯಕ್ಷತೆ ವಹಿಸಿದ್ದರು.
8ನೇ ತರಗತಿಯ 27 ವಿದ್ಯಾರ್ಥಿಗಳಿಗೆ ಸೈಕಲ್ ಮತ್ತು ಶಾಲೆಯ ಎಲ್ಲ 78 ವಿದ್ಯಾರ್ಥಿಗಳಿಗೆ ಶೂ ಮತ್ತು 2 ಜತೆ ಸಾಕ್ಸ್‌ಗಳನ್ನು ವಿತರಿಸಲಾಯಿತು.
ಹಳೆಯಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ವಸಂತ ಬೆರ್ನಾಡ್, ಅಝೀಜ್, ಎಚ್.ಹಮೀದ್, ಪಡುಪಣಂಬೂರು ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಸದಸ್ಯ ಉಮೇಶ್ ಪೂಜಾರಿ, ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ, ಶಾಲಾ ಸಹ ಶಿಕ್ಷಕರಾದ ಪ್ರಭಾ, ಸುಜಾತಾ, ಶ್ರೀಲತಾ ಎಚ್.ಟಿ. ಭವಾನಿ, ಲವಿನಾ ತೆರೆಜಾ ಕುಟಿನ್ಹೋ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಮೈಕಲ್ ಡಿ’ಸೋಜಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹ ಶಿಕ್ಷಕಿ ವಿನಯಾ ವಂದಿಸಿದರು.