ಸಿಡಿ ಬಾಕ್ಸ್ ಬರಬಹುದು ಎಂದು ಕಾಯುತ್ತಿದ್ದರು ಸುದೀಪ್. ಅಷ್ಟರಲ್ಲಿ ಶಾಲೆಗಳಲ್ಲಿ ಹೊಡೆಯುವ ಗಂಟೆಯನ್ನು ತಂದು ವೇದಿಕೆಯ ಮೇಲಿಡಲಾಯಿತು. ಅದೇನು ಎಂದು ಸುದೀಪ್ ಆಶ್ಚರ್ಯದಿಂದ ನೋಡುತ್ತಿರುವಾಗಲೇ, “ಸಿಡಿ ಕಾಲ ಮುಗೀತು. ಈಗೇನಿದ್ದರೂ ಪೆನ್ ಡ್ರೈವ್ ಕಾಲ. ನೀವು ಬೆಲ್ ಮಾಡಿ ಸಾರ್. ಹಾಡುಗಳು ಬಿಡುಗಡೆಯಾದಂತೆ’ ಎಂದರು ರಿಷಭ್ ಶೆಟ್ಟಿ. ಸುದೀಪ್ ಕೋಲಿನಿಂದ “ಢಣ್ ಢಣ್ ಢಣ್’ ಅಂತ ಬಾರಿಸುತ್ತಿದ್ದಂತೆ, ಸಾಂಕೇತಿಕವಾಗಿ ಹಾಡುಗಳು ಬಿಡುಗಡೆಯಾದವು. ಆ ನಂತರ ಎಲ್ಲರೂ ಪೆನ್ ಡ್ರೈವ್ ಹಿಡಿದುಕೊಂಡು ಫೋಟೋ ಆಗುವುದರ ಮೂಲಕ ಸಮಾರಂಭ ಮುಗಿಯಿತು.
ಅಂದಹಾಗೆ, ಇದು “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ – ರಾಮಣ್ಣ ರೈ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಸುದೀಪ್ ಬಂದಿದ್ದರು. ಚಿತ್ರದಲ್ಲಿ ನಟಿಸಿರುವ ಅನಂತ್ ನಾಗ್, ಹಾಡು ಬರೆದಿರುವ ಕೆ. ಕಲ್ಯಾಣ್ ಹಾಜರಿದ್ದರು. ಮಿಕ್ಕಂತೆ ನಿರ್ದೇಶಕರಾದ ಶಿವಮಣಿ, ಜಯತೀರ್ಥ ಮುಂತಾದವರು ಶುಭ ಕೋರುವುದಕ್ಕೆ ಬಂದಿದ್ದರು. ಹಾಡುಗಳು ಬಿಡುಗಡೆಯಾಗುವುದಕ್ಕಿಂತ ಮುನ್ನ, ಎಲ್ಲರೂ ಮಾತಾಡುವುದಕ್ಕಿಂತ ಮುಂಚೆ ಮೊದಲು ನಾಲ್ಕು ಹಾಡುಗಳನ್ನು ತೋರಿಸಲಾಯಿತು. ನಂತರ ಮಾತು.
ಅನಂತ್ ನಾಗ್ ಅವರು ರಿಷಭ್ ಶೆಟ್ಟಿಯನ್ನು ನೋಡಿದ್ದು ಹೇಮಂತ್ ರಾವ್ ಮದುವೆ ಸಂದರ್ಭದಲ್ಲಿ. ಆಗ ಅನಂತ್ ಅವರ ಹತ್ತಿರ ಬಂದ ರಿಷಭ್, ಮಾತಾಡೋಕಿದೆ ಎಂದರಂತೆ. ಅದೊಂದು ಗೊತ್ತು ಮಾಡಿದ ದಿನ ಅನಂತ್ ನಾಗ್ ಅವರ ಮನೆಗೆ ಹೋದ ರಿಷಭ್, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ – ರಾಮಣ್ಣ ರೈ’ ಚಿತ್ರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಕಥೆ ಮತ್ತು ಪಾತ್ರದ ಬಗ್ಗೆಯೂ ಹೇಳಿದ್ದಾರೆ. “ರಿಷಭ್ ಕಥೆ ಹೇಳುವಾಗ ನಗುತ್ತಿದ್ದರು. ಅವರಿಗೆ ಚಿತ್ರದ ಬಗ್ಗೆ ತುಂಬಾ ಅಬೆÕಷನ್ ಇದೆ ಅಂತ ಆಗಲೇ ಅನಿಸಿತ್ತು. ಇನ್ನು ಚಿತ್ರದಲ್ಲಿ ಪಾರ್ಟು ಮಾಡಿದೆ. ಆ ಸಂದರ್ಭದಲ್ಲಿ ಅವರನ್ನು ನೋಡಿ ಅವಕ್ಕಾದೆ. ನಿರ್ಮಾಣ, ನಿರ್ದೇಶನ. ನಟನೆ ಎಲ್ಲಾ ಅವರೇ ಮಾಡ್ತಾರೆ. ಈ ಚಿತ್ರದಲ್ಲಿ ಕನ್ನಡದ ಮೇಲಿನ ಪ್ರೀತಿ, ಕಳಕಳಿ ಮತ್ತು ಅಭಿಮಾನ ಇದೆ. ಇಡೀ ಚಿತ್ರದ ಮರ್ಮ ಒಂದೇ ಒಂದು ಸಂಭಾಷಣೆಯಲ್ಲಿದೆ. ಒಂದು ಮಗು ಯಾವ ಭಾಷೇಲಿ ಕನಸು ಕಾಣುತ್ತೋ, ಅದೇ ಭಾಷೆಯಲ್ಲಿ ಅದಕ್ಕೆ ಶಿಕ್ಷಣ ಸಿಗಬೇಕು ಎಂಬ ಸಂಭಾಷಣೆ ಅದ್ಭುತವಾಗಿದೆ’ ಎಂದು ಖುಷಿಪಟ್ಟರು.
ಚಿತ್ರದ ಹಾಡುಗಳನ್ನು ನೋಡಿ ಖುಷಿಯಾಗಿದ್ದ ಸುದೀಪ್, “ಇಲ್ಲಿ ಮುಗ್ಧತೆ ಕಾಣುತ್ತದೆ. ಅದನ್ನು ಸೆರೆಹಿಡಿಯುವುದಕ್ಕೆ ನಿಜಕ್ಕೂ ತಾಳ್ಮೆ ಬೇಕು. ಮುಂಚೆ ರಿಷಭ್‌ಗೆ ಇಷ್ಟೊಂದು ತಾಳ್ಮೆ ಇರಲಿಲ್ಲ. ಮದುವೆಯಾದ ಮೇಲೆ ಬಂದಿದೆ. ಹಾಗಾಗಿ ಅದರ ಕ್ರೆಡಿಟ್ ಅವರ ಹೆಂಡತಿಗೆ ಹೋಗಬೇಕು. ನಾನು ರಿಷಭ್ ಅವರ ಜರ್ನಿಯನ್ನು ನೋಡಿಕೊಂಡು ಬಂದವನು. ನಂಬಿಕೆ, ಭಯ, ವಿಶ್ವಾಸ, ಅತಿಯಾದ ವಿಶ್ವಾಸ ಎಲ್ಲವನ್ನೂ ನೋಡಿದ್ದೇನೆ. ಈ ಚಿತ್ರಕ್ಕೆ ಮತ್ತು ಅವರಿಗೆ ಒಳ್ಳೆಯದಾಗಲಿ. ಇನ್ನು ಅನಂತ್ ನಾಗ್ ಅವರು ನಮ್ಮ ಗುರುಗಳ ತರಹ. ಅವರನ್ನ ನೋಡೋದು, ಮಾತಾಡೋದೇ ದೊಡ್ಡ ಸಂತೋಷ’ ಎಂದರು.
ಕೆ. ಕಲ್ಯಾಣ್ ಅವರು ಈ ಚಿತ್ರಕ್ಕೊಂದು ಪ್ರಾರ್ಥನೆ ಗೀತೆ ಬರೆದಿದ್ದಾರೆ. “ಯೋಚನೆ ಮಾಡೋಕೆ ಸಾವಿರ ಹಾಡುಗಳು. ಪ್ರಾರ್ಥಿಸೋಕೆ ಕೆಲವೇ ಹಾಡುಗಳು’ ಎಂದು ಅವರು ಹೇಳಿದರು. ಚಿತ್ರಕ್ಕೆ ಒಂಬತ್ತು ಹಾಡುಗಳನ್ನು ಸಂಯೋಜಿಸಿರುವ ವಾಸುಕಿ ವೈಭವ್, “ದಡ್ಡ ಪ್ರವೀಣ …’ ಹಾಡನ್ನು ತಾವೇ ಹಾಡಿದ್ದು ಎಂದು ಯಾರಿಗೆ ಹೇಳಿದರೂ ನಂಬುತ್ತಿಲ್ಲ ಎಂದು ಬೇಸರಿಸಿಕೊಂಡರು. ರಿಷಭ್ ಎಲ್ಲರಿಗೂ ಥ್ಯಾಂಕ್ಸ್ ಹೇಳಿದರು.