Advertisement

ಸರ್ಕಾರ ಆದಷ್ಟು ಬೇಗ ರೆಪರ್ಟರಿ ಆರಂಭಿಸಲಿ

03:40 PM Dec 02, 2018 | |

ದಾವಣಗೆರೆ: ರಾಜ್ಯ ಸರ್ಕಾರ ವಿಳಂಬ ಮಾಡದೇ ದಾವಣಗೆರೆ ಜಿಲ್ಲೆಯಲ್ಲಿ ರೆಪರ್ಟರಿ (ರಂಗ ತರಬೇತಿ ಕೇಂದ್ರ) ತೆರೆಯಲು ಕಾರ್ಯೋನ್ಮುಖವಾಗಲಿ ಎಂದು ಸಾಣೇಹಳ್ಳಿ ಮಠದ ಶ್ರೀ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

ಶನಿವಾರ, ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ರಂಗಭೂಮಿ ಕಲಾವಿದರ ಒಕ್ಕೂಟ ಹಮ್ಮಿಕೊಂಡಿದ್ದ ನಾಟಕೋತ್ಸವ, ಸುಗಮ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಕೊಂಡಜ್ಜಿಯಲ್ಲಿ ರೆಫರ್ಟರಿ ಸ್ಥಾಪಿಸಲು ಸರ್ಕಾರ ಪ್ರಕಟಿಸಿದ್ದು, ಹಲವು ತಿಂಗಳು ಕಳೆದರೂ ಅದು ಅನುಷ್ಠಾನಕ್ಕೆ ಬರದಿರುವುದು ನೋವಿನ ಸಂಗತಿ. ಹಾಗಾಗಿ ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಬೇಕಿದೆ ಎಂದರು.

ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರಿಗೆ ತರಬೇತಿ ನೀಡಲು ಕೆಲವು ಕಟ್ಟಡಗಳಿವೆ. ಅವುಗಳಲ್ಲೇ ರಂಗಾಸ್ತಕರಿಗೆ
ಸದ್ಯಕ್ಕೆ ತರಬೇತಿ ನೀಡುವ ಕೆಲಸ ಆರಂಭಿಸಲಿ ಎಂದು ಹೇಳಿದರು. ವೃತ್ತಿ ರಂಗಭೂಮಿ ಕಲಾವಿದರು ತಾವು ನೋವುಂಡು ಸಮಾಜಕ್ಕೆ ನಲಿವು ಕೊಡುವಂತಹ ಸಹೃದಯಿಗಳು. ಅವರ ನಿಜ ಜೀವನ ತುಂಬಾ ಶೋಚನೀಯವಾಗಿದೆ. ಅವರಿಗೆ ಮಾಸಾಶನ ಬಿಟ್ಟರೆ ಬೇರಾವ ಸೌಲಭ್ಯ ದೊರೆಯುತ್ತಿಲ್ಲ. ಹಾಗಾಗಿ ಸರ್ಕಾರ ಕಲಾವಿದರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಲಿ ಎಂದು ಹೇಳಿದರು.

ಈ ಹಿಂದೆ ಇದ್ದಂತಹ ಉತ್ತಮ ಕಲಾವಿದರ ತಂಡಗಳು ಕಣ್ಮರೆ ಆಗಿವೆ. ಆದ್ದರಿಂದ ಕೆಲವು ನಾಟಕ ಕಂಪನಿಯವರು ಪ್ರಸ್ತುತ ಜನರ ಅಭಿರುಚಿ ಅರಿತು ತಮ್ಮ ನಾಟಕದ ಸ್ವರೂಪವನ್ನೇ ಬದಲಾಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಮನೋವಿಕಾರ ಉಂಟಾಗುತ್ತಿದೆಯೇ ವಿನಹ ಜನರ ಮನಸ್ಸಿಗೆ ಉಲ್ಲಾಸ ಉಂಟು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೃತ್ತಿ ರಂಗಭೂಮಿಯ ತಾಕತ್ತು ಹವ್ಯಾಸಿ ರಂಗಭೂಮಿಗಿಲ್ಲ. ಈ ಹಿನ್ನೆಲೆಯಲ್ಲಿ ವೃತ್ತಿ ರಂಗಭೂಮಿ ಕಲಾವಿದರಿಗೆ ಉತ್ತಮ ತರಬೇತಿ ನೀಡಿದ್ದಾದರೆ ಅದ್ಭುತ ಕಲಾವಿದರನ್ನು ತಯಾರು ಮಾಡಬಹುದು ಎಂದರು. ಕಲಾವಿದರಾದ ಭದ್ರಪ್ಪ ಮತ್ತು ವೀರಯ್ಯಸ್ವಾಮಿ ಇಬ್ಬರೂ ಒಟ್ಟಾಗಿ ವೃತ್ತಿ ರಂಗಭೂಮಿ ಕಟ್ಟಿ ಬೆಳೆಸಿದವರು. 

Advertisement

ಆದರೀಗ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಎರಡು ಬಣ ಮಾಡಿಕೊಳ್ಳುವುದು ಬೇಡ. 2 ಗುಂಪಿನ ಪದಾಧಿಕಾರಿಗಳು ಸಿರಿಗೆರೆಗೆ ಬನ್ನಿ. ಅಲ್ಲಿ ಸ್ವಾಮೀಜಿ ತಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ. ಆಗ ದಾವಣಗೆರೆಯಲ್ಲಿ ಮತ್ತಷ್ಟು ವೃತ್ತಿ ರಂಗಭೂಮಿ ಕಟ್ಟಿ ಬೆಳೆಸಲು ಸಾಧ್ಯ ಆಗುತ್ತದೆ ಎಂದು ಹೇಳಿದರು.

ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಕಲಾವಿದರ ನಡುವೆ ಇರುವ ಗೊಂದಲದ ನಿವಾರಣೆ ಬಗ್ಗೆ ಸಾಣೆಹಳ್ಳಿಯಲ್ಲಿ ಕಲಾವಿದರಿಗೆ ತರಬೇತಿ ನೀಡಬೇಕು ಎಂಬುದಾಗಿ ಹಿರಿಯ ಕಲಾವಿದರ ಕೋರಿಕೆಗೆ ಪ್ರತಿಕ್ರಿಯಿಸಿದ ಪಂಡಿತಾರಾಧ್ಯ ಶ್ರೀಗಳು, ಸಾಣೆಹಳ್ಳಿಗೆ ಬರುವವರ ಪಟ್ಟಿ ಮಾಡಿಕೊಡಿ. ಕನಿಷ್ಠ ನಮ್ಮಲ್ಲಿ 15 ರಿಂದ 20 ದಿನ ತರಬೇತಿ ಪಡೆಯಲು ಕಲಾವಿದರು ಸಿದ್ಧರಿರಬೇಕು ಎಂದು ತಿಳಿಸಿದರು.

ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿ, ಸಮಗ್ರ ರಂಗಕಲೆ ಕಲಿಸುವ ರೆಫರ್ಟರಿ ಕೊಂಡಜ್ಜಿಯಲ್ಲಿ ಆರಂಭ ಆಗುವುದು ಸ್ವಾಗತಾರ್ಹ. ಆದರೆ, ಈ ಕೇಂದ್ರವು 18 ರಿಂದ 25 ವರ್ಷದೊಳಗಿನವರಿಗೆ ತರಬೇತಿ ನೀಡುವ ಮೂಲಕ ಮುಂದಿನ 25 ವರ್ಷಗಳ ಕಾಲ ವೃತ್ತಿ ರಂಗಭೂಮಿ ತನ್ನದೇ ಆದ ಗತವೈಭವ ಸಾಧಿಸುವ ಹಾಗೂ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಹೊಸ ನಾಟಕಗಳನ್ನು ಕಲಿಯುವ ನಿಟ್ಟಿನಲ್ಲಿ ಯುವ ಕಲಾವಿದರು ಮುಂದಾಗಲಿ ಎಂದರು.

ಒಕ್ಕೂಟದ ಕೆ. ವೀರಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next