Advertisement

ಪ್ರಕೃತಿಯ ಮಡಿಲಲ್ಲಿ ಮೈದಳೆದ ಶಾಲೆಗೆ 106 ವರ್ಷ

12:32 AM Nov 15, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಸಿದ್ದಾಪುರ: ಪ್ರಕೃತಿಯ ಮಡಿಲಲ್ಲಿ ಮೈದಳೆದು ಸಾರ್ಥಕ ಸೇವೆಯೊಂದಿಗೆ ಸಹಸ್ರ ವಿದ್ಯಾರ್ಥಿಗಳಿಗೆ ಜ್ಞಾನಸುಧೆಯನ್ನು ಧಾರೆಯೆರೆದಿರುವ ಮೂಡುಬಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 106 ವರ್ಷ. 2014ರಲ್ಲಿ ಶಾಲೆಯು ಶತಮಾನೋತ್ಸವ ಆಚರಿಸಿದ್ದು, ಪ್ರಸ್ತುತ 76 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಪ್ರಕೃತಿ ಮಡಿಲಿನಲ್ಲಿರುವ ನುಕ್ಯಾಡಿ ಶ್ರೀ ನಿದ್ಧಿವಿನಾಯಕ ದೇವಸ್ಥಾನದ ತಪ್ಪಲಲ್ಲಿ ಮೂಡುಬಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು 1913ರಲ್ಲಿ ಪ್ರಾರಂಭಗೊಂಡಿತು. ನುಕ್ಯಾಡಿ ಶ್ರೀ ನಿದ್ಧಿವಿನಾಯಕ ದೇವಸ್ಥಾನ ಸಮುದ್ರ ಮಟ್ಟದಿಂದ ಸಾವಿರ ಅಡಿಗೂ ಹೆಚ್ಚು ಎತ್ತರದ ಪ್ರದೇಶ ಹಾಗೂ ದಟ್ಟಾರಣ್ಯವಾಗಿರುವುದರಿಂದ ಹಿರಿಯರೆಲ್ಲರೂ ಸೇರಿಕೊಂಡು ಅಲ್ಲಿರುವ ಶಾಲೆಯನ್ನು ಮೂಡುಬಗೆ ಕುಮಾರ ಕನ್ನಂತ ಅವರ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿದರು.

ಅನಂತರ ಈ ಜಾಗವನ್ನು ಮಂಜುನಾಥ ಕಿಣಿ ಅವರು ಖರಿದಿಸಿದರು. ಬಳಿಕವೂ ಅನೇಕ ವರ್ಷಗಳ ಕಾಲ ಈ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆದಿದೆ. ಆ ಸಮಯದಲ್ಲಿ ಊರಿನವರು ಹಾಗೂ ಶಿಕ್ಷಕರು ಸೇರಿಕೊಂಡು ಪ್ರಸ್ತುತ ಶಾಲೆ ನಡೆಯುತ್ತಿರುವ ಕಟ್ಟಡಕ್ಕೆ 1962ರಲ್ಲಿ ಸ್ಥಳಾಂತರಗೊಳ್ಳಿಸಿದರು. ಈ ಸಮಯದಲ್ಲಿಯೇ ಶಾಲೆಯು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿಯೂ ಮಾರ್ಪಾಡುಕೊಂಡಿತು. ಅನೇಕ ಊರುಗಳಿಗೆ ಏಕಾಮಾತ್ರ ಶಾಲೆಯಾದರಿಂದ ಮಕ್ಕಳ ಸಂಖ್ಯೆಕೂಡ ಹೆಚ್ಚಾಯಿತು. ಹಾಗೆಯೇ ತರಗತಿಯ ಬೇಡಿಕೆಯು ಹೆಚ್ಚಾದವು.

ಬೇಡಿಕೆ
ಸರಕಾರ ಶಾಲೆಗೆ 5 ಎಕ್ರೆ ಜಾಗ ಕಾದಿರಿಸಿದೆ. ಶಾಲೆಯ ಕಟ್ಟಡ ಹಳೆಯದಾಗಿರುವುದರಿಂದ ಒಂದು ಸುಸಜ್ಜಿತವಾದ ಶಾಲೆ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸಬೇಕು ಎಂಬುದು ಸ್ಥಳೀಯರ ಮತ್ತು ಹಳೆ ವಿದ್ಯಾರ್ಥಿಗಳ ಬೇಡಿಕೆ.

Advertisement

ಶಾಲೆಯು ಉತ್ತಮ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಹೊಂದಿದೆ. ಪಾಲಕರು ಹಾಗೂ ವಿದ್ಯಾಭಿಮಾನಿಗಳು ಎಲ್ಲ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಮುಖ್ಯ ಶಿಕ್ಷಕರ ಕೊಠಡಿ, ಕುಡಿಯುವ ನೀರು, ಶೌಚಾಲಯದ ಅಗತ್ಯಇದೆ.
-ಕೆ. ನಾಗೇಶ ಕಿಣಿ, ಮುಖ್ಯ ಶಿಕ್ಷಕ

ಖಾಸಗಿ ಶಾಲೆಗಳ ಪೈಪೋಟಿಯ ನಡುವೆಯೂ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇದೆ. ಸ್ಥಳೀಯರ, ಉದ್ಯಮಿಗಳ ಹಾಗೂ ಹೊಸಂಗಡಿ ಕಾಲೇಜಿನ ಎನ್ನೆಸ್ಸೆಸ್‌ ಶಿಬಿರದ ವಿದ್ಯಾರ್ಥಿಗಳ ಸಹಕಾರದಿಂದ ಉತ್ತಮ ಆಟದ ಮೈದಾನ ನಿರ್ಮಾಣವಾಗಿದ್ದು, ಕಾಂಪೌಂಡ್‌ ಸೇರಿದಂತೆ ಕೆಲವು ಕಾಮಗಾರಿಗಳು ಆಗಬೇಕಾಗಿವೆ.
-ಪ್ರಭಾಕರ ಆಚಾರ್ಯ ಕೊಡ್ಲಾಡಿ,
ಎಸ್‌ಡಿಎಂಸಿ, ಅಧ್ಯಕ್ಷರು

ವಿದ್ಯಾರ್ಥಿಗಳ ಸಾಧನೆ
ಈ ಶಾಲೆಯಿಂದ ವಿವಿಧ ಕ್ಷೇತ್ರಗಳಿಗೆ ಸಾಕಷ್ಟು ಪ್ರತಿಭೆಗಳು ಹೊರ ಹೊಮ್ಮಿವೆ. ಕ್ರೀಡಾ ಕ್ಷೇತ್ರದ ಸಾಧಕ ಎಸ್‌. ಗಣೇಶ ಭೋವಿ ಶಾನ್ಕಟ್ಟು ಅವರು ರಿಲೇಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ, ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾರೆ. ಸೂರ್ಯ ಮೂಡುಬಗೆ ಅವರು ಕಿರುತೆರೆಯ ಕಲಾವಿದರಾಗಿದ್ದಾರೆ. ಡಾ| ಅನಂತಪದ್ಮನಾಭ ಆಚಾರ್ಯ ಮೂಡುಬಗೆ ಹಾಗೂ ಡಾ| ನವೀನ ಕೊಡ್ಲಾಡಿ ಅವರು ಡಾಕ್ಟರೇಟ್‌ ಪದವಿ ಪಡೆದುಕೊಂಡಿದ್ದಾರೆ. ಡಾ| ಕೆ. ಸುರೇಂದ್ರ ಶೆಟ್ಟಿ ಕೊಡ್ಲಾಡಿ, ಪ್ರೊ| ಎ. ಚಿತ್ತರಂಜನ್‌ ಹೆಗ್ಡೆ, ಡಾ| ಪ್ರವೀಣ್‌ ಶೆಟ್ಟಿ, ಪ್ರಶಾಂತಕುಮಾರ ಶೆಟ್ಟಿ ಕೊಡ್ಲಾಡಿ ತಮ್ಮ ಕಾರ್ಯಕ್ಷೇತ್ರದ ಸಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿಗಳಿಸಿದ್ದಾರೆ.

ಡಿಜಿಟಲೀಕರಣದ ಕನಸು
ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಮಂಗಳೂರು ಇದರ ಬ್ಯುಸಿನೆಸ್‌ ಆಡ್ಮಿನಿಸ್ಟ್ರೇಶನ್‌ ಡಿಪಾರ್ಟ್‌ಮೆಂಟ್‌ನ ಡೈರೆಕ್ಟರ್‌ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಡಾ| ಅನಂತಪದ್ಮನಾಭ ಆಚಾರ್ಯ ಮೂಡುಬಗೆ ಅವರು ಶಾಲೆಯನ್ನು ಡಿಜಿಟಲೀಕರಣಗೊಳಿಸುವ ಕನಸು ಕಾಣುತ್ತಿದ್ದು ಶಾಲೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

 -ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next