ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ನಾವೇನು ಮಾಡಬಹುದು ಎಂಬ ಬಗ್ಗೆ ಶಾಲಾ ಶಿಕ್ಷಕರು ಈ ಲೇಖನ ಸರಣಿಯಲ್ಲಿ ಬೆಳಕು ಚೆಲ್ಲಲಿದ್ದಾರೆ.
ತಾಯಿ ಕಲಿಸಿದ ತೊದಲು ನುಡಿಗೆ ಶಿಷ್ಟ ರೂಪ ನೀಡುವುದೇ ಶಾಲೆಗಳು. ಎಳವೆ ಯಿಂದಲೇ ಮಾತೃಭಾಷಾ ಶಿಕ್ಷಣದ ಮೂಲಕ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಮೂಡಿಸಬೇಕು. ಆದ್ದರಿಂದ ಕನ್ನಡದ ಉಳಿವಿಗೆ ಕನ್ನಡದ ನಿಜವಾದ ಅಸ್ಮಿತೆಗಳಾ ಗಿರುವ ಸರಕಾರಿ ಶಾಲೆಗಳು ಉಳಿಯಬೇಕು. ಕನ್ನಡ ಶಾಲೆಗಳು ಹೆಚ್ಚು ಆಕರ್ಷಣೀ ಯವಾಗಬೇಕು. ಮಾತೃಭಾಷೆಯ ಕಲಿಕೆ ಕೇವಲ ಉದ್ಯೋಗಕ್ಕೆ ಮಾತ್ರವಲ್ಲ, ಬದುಕಿ ನುದ್ದಕ್ಕೂ ಅನಿವಾರ್ಯ ಅನ್ನುವುದನ್ನು ತಿಳಿಸುವ ಕಾರ್ಯವಾಗಬೇಕಾಗಿದೆ. ಸದ್ದಿಲ್ಲದೆ ಮುಚ್ಚುತ್ತಿರುವ ಕನ್ನಡ ಶಾಲೆಗಳಿಂದ ಭಾಷೆಯ ಬೇರಿಗೆ ಕೊಡಲಿ ಏಟು ಬೀಳುತ್ತಿದೆ ಎನ್ನುವ ಸತ್ಯ ಅರಿವಾಗಬೇಕು. ಕನ್ನಡಿಗರಲ್ಲಿ ಕನ್ನಡತನ ಬಡಿದೆಬ್ಬಿಸುವ ಕೆಲಸವು ಕೇವಲ ಸರಕಾರದಿಂದ ಮಾತ್ರವಲ್ಲ, ಪ್ರತಿಯೊಬ್ಬ ಕನ್ನಡಿಗರಿಂದಲೂ ನಡೆಯಬೇಕು.
ಭಾಷೆ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಹಾಗಾಗಿ ಸಾಹಿತ್ಯ ಕೇವಲ ಬುದ್ಧಿ ಜೀವಿಗಳಿಗೆ ಮಾತ್ರ ಎನ್ನುವ ಭಾವ ದೂರವಾಗಲಿ. ಜನಸಾಮಾನ್ಯರನ್ನು ತಲುಪುವ ಸಾಹಿತ್ಯ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಗೊಳ್ಳಲಿ. ಮಕ್ಕಳಲ್ಲಿ ಪುಸ್ತಕ ಓದುವ, ಕಥೆ, ಕವನ, ಬರೆಯುವ ಹವ್ಯಾಸ ಬೆಳೆಸಬೇಕು. ಪತ್ರಿಕೆಗಳು ಮಕ್ಕಳ ಬರಹಕ್ಕಾಗಿ ಅಂಕಣ ಮೀಸಲಿಡಬೇಕು. ಗೃಹಿಣಿಯರು, ಕಾರ್ಮಿಕರು, ಚಾಲಕರು ಹೀಗೆ ಎಲ್ಲ ವರ್ಗದ ಸಾಮಾನ್ಯ ಜನರನ್ನು ಸಹ ಓದಿಗೆ ಹಚ್ಚುವ, ಅವರ ಅನುಭವ ಲೇಖನ ಗಳನ್ನು ಪ್ರಕಟಿಸುವ ಮೂಲಕ ಪ್ರೋತ್ಸಾಹಿಸಬೇಕು.
ಭಾಷಾಭಿಮಾನ ಎಲ್ಲರೊಳಗೂ ಇರುತ್ತದೆ. ಅದಕ್ಕೊಂದು ವೇದಿಕೆ, ಪ್ರೋತ್ಸಾಹ ದೊರೆತರೆ ಭಾಷೆ ಬೆಳೆಯಬಲ್ಲದು. ಭಾಷೆಯ ಬಗೆಗಿನ ಅಭಿಮಾನವು ಇನ್ನಷ್ಟು ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಸರಕಾರ, ಸಂಬಂಧಪಟ್ಟ ಇಲಾಖೆಗಳು, ಸಂಘ- ಸಂಸ್ಥೆಗಳು, ಮಾಧ್ಯಮಗಳು ಕಾರ್ಯಪ್ರವೃತ್ತರಾದರೆ ಜನಸಾ ಮಾನ್ಯರು ಕೈಜೋಡಿಸುತ್ತಾರೆ. ಭಾಷೆಯೂ ಬೆಳೆದು, ಉಳಿಯುತ್ತದೆ.
ನಾಗಮ್ಮ, ಸಹ ಶಿಕ್ಷಕಿ, ಸರಕಾರಿ ಹಿ.ಪ್ರಾ. ಶಾಲೆ ಕಂಚುಗೋಡು, ಬೈಂದೂರು ವಲಯ