ಕಾಲೇಜು ಜೀವನದ ಕೊನೆಕೊನೆಯಲ್ಲಿ ಒಂದು ಅತೃಪ್ತಿ ನನ್ನನ್ನು ಕೊರೆಯುತ್ತಿತ್ತು. ಇಲ್ಲಿಲ್ಲದ್ದು ಏನೋ ಅಲ್ಲಿರಬಹುದು ಅಂತ ಅಂದು ನಾನು ತೆಗೆದುಕೊಂಡಿದ್ದ ಒಂದು ನಿರ್ಧಾರ ತಪ್ಪಾಗಿರಬಹುದೆ ಅಂತ ಅನ್ನಿಸುವುದಕ್ಕೆ ಆರಂಭವಾಗಿತ್ತು. ಆಗ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದು ಒಂದು ಸರಕಾರಿ ಶಾಲೆಯಲ್ಲಿ. ಆದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ಬಗೆಯ ಕೀಳರಿಮೆ ತನ್ನಷ್ಟಕ್ಕೇ ಮೂಡಿತ್ತು- ಸರಕಾರಿ ಶಾಲೆಯಲ್ಲಿ ಓದಿದವರು ಸರಿಯಾಗಿ ಇಂಗ್ಲಿಷ್ ಮಾತನಾಡುವುದಿಲ್ಲ ಎಂಬುದಾಗಿ.
ಖಾಸಗಿ ಶಾಲೆಯಲ್ಲಿ ಅವಕಾಶಗಳು ಜಾಸ್ತಿ ಸಿಗುತ್ತವೆ. ನನ್ನ ಬೆಳವಣಿಗೆಗೆ ಖಾಸಗಿ ಶಾಲೆಯೇ ಸೂಕ್ತ ಅನ್ನೋ ಕಲ್ಪನೆಗಳನ್ನು ನಾನೇ ಹುಟ್ಟು ಹಾಕಿಕೊಂಡು ಅಪ್ಪ-ಅಮ್ಮನನ್ನೂ ಮನವೊಲಿಸಿ ಸರಕಾರಿಯಿಂದ ಖಾಸಗಿ ಶಾಲೆಗೆ ವಲಸೆ ಹೋಗಿದ್ದೆ. ಅಲ್ಲಿಂದ ಎಂಟು ವರುಷ ಖಾಸಗಿ ಶಾಲೆಯಲ್ಲಿಯೇ ಕಲಿತೆ. ಅದೂ ಐದು ವರುಷ ಇಂಗ್ಲಿಷ್ ಮಾಧ್ಯಮ. ಆದರೆ, ಇನ್ನೂ ನನಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಸಾಧ್ಯವಾಗಿಲ್ಲ.
ಖಾಸಗಿಯಲ್ಲಿ ಜನಸಂಖ್ಯೆ ಹೆಚ್ಚು. ಅವಕಾಶಗಳಿಗಾಗಿ ಭಾಗಶಃ ಯುದ್ಧವನ್ನೇ ಮಾಡಬೇಕಾಗುತ್ತದೆ. ನನ್ನ ಬೆಳವಣಿಗೆ ನನ್ನನ್ನು ಅವಲಂಬಿಸಿತ್ತೇ ಹೊರತು ನಾನು ಎಲ್ಲಿ ಕಲಿಯುತ್ತೇನೆ ಎಂಬುದರ ಮೇಲಲ್ಲ.
ನನ್ನದೇ ಆದ ನೆಪಗಳನ್ನ ಸೃಷ್ಟಿಸಿಕೊಂಡು ಅಂದು ಆ ನಿರ್ಧಾರ ಕೈಗೊಂಡ ನಾನು ನಿಜಕ್ಕೂ ಸಾಧಿಸಿದ್ದೇನು? ಸರಕಾರಿ ಸಂಸ್ಥೆಯಲ್ಲಿ ಸಿಗಬಹುದಾಗಿದ್ದ ಸುಂದರ ಅನುಭವಗಳನ್ನು ಕಳೆದುಕೊಂಡೆ ಅಷ್ಟೆ. ಸರಕಾರಿ ಶಾಲೆಯಲ್ಲಿದ್ದಾಗ ನಾನು ಯಾವತ್ತೂ ಪರೀಕ್ಷೆಗೆ ಓದಿಲ್ಲ. ಟೀಚರ್ ಪಾಠ ಮಾಡಿದ್ದರಲ್ಲಿ ನೆನಪಿದ್ದದ್ದನ್ನ ಬರೆಯುತ್ತಿದ್ದೆ. ಮರೆತು ಹೋಗಿದ್ದನ್ನು ಪರೀಕ್ಷಾ ಕೊಠಡಿಯಲ್ಲಿ ಹತ್ತಿರದಲ್ಲೆಲ್ಲೋ ಇರುತ್ತಿದ್ದ ಹುಡುಗಿಯರು ನೆನಪಿಸುತ್ತಿದ್ದರು. ಹಾಗಾಗಿ ಪರೀಕ್ಷೆ ಎಂದೂ ಕಷ್ಟವಾಗಲಿಲ್ಲ. ಇನ್ನು ಹೋಮ್‌ವರ್ಕ್ ಎಂದರೆ ಏನೆಂದೇ ಗೊತ್ತಿರಲಿಲ್ಲ. ಮನೆಗೆ ಓಡಿ ಬ್ಯಾಗನ್ನೆಸೆದು ಆಟದ ಮೈದಾನಕ್ಕೆ ಓಡಿ ಕತ್ತಲಾಗುವವರೆಗೆ ಆಟವಾಡೋದೇ ನನಗಿದ್ದ ಒಂದೇ ಒಂದು ಹೋಮ್‌ವರ್ಕ್.
ಪ್ರತಿಭಾ ಕಾರಂಜಿಯಲ್ಲಿ ಸಿಕ್ಕಿರೋ ಬಹುಮಾನಗಳು, ಸಾರ್ವಜನಿಕ ಗಣೇಶೋತ್ಸವಕ್ಕೆ ನಮ್ಮ ಶಾಲೆಯ ಕಾರ್ಯಕ್ರಮ, ಅದಕ್ಕೆ ತಿಂಗಳುಗಟ್ಟಲೆ ಪ್ರಾಕ್ಟೀಸು, ಅದರ ಎಲ್ಲ ಖರ್ಚು ತಮ್ಮ ಕೈಯಿಂದ ಭರಿಸುತ್ತಿದ್ದ ಟೀಚರ್‌ಗಳು. ಒಂದು ರೂಪಾಯಿ ಖರ್ಚಿಲ್ಲದೆ ನಡೆಯುತ್ತಿದ್ದ ಶಾಲಾ ಚುನಾವಣೆ, ಕ್ಲಾಸಿನ ಎದುರಿದ್ದ ಕಲ್ಲಿನಂಥ ನೆಲವನ್ನು ಅಗೆದು ಸಮಮಾಡಿ ನಾವು ಬೆಳೆಸಿದ್ದ ಕೈತೋಟ, ಬಿಸಿಯೂಟ, ಆಟ, ಪಾಠ, ಜಗಳ, ಸ್ನೇಹ, ಎಲ್ಲಿದ್ದಾರೆ ಅಂತ ಗೊತ್ತೇ ಇರದಿರೋ ಕೆಲ ಸ್ನೇಹಿತರು, ಆಗಾಗ ಎದುರು ಸಿಕ್ಕು ನಗುವವರು, ಕಡಿಮೆ ಬಜೆಟಿನ ಶಾಲಾ ಪ್ರವಾಸ… ಹೀಗೆ ಸರಕಾರಿ ಶಾಲೆಯ ನೆನಪುಗಳು ಅಮರ, ಮಧುರ, ಸುಂದರ.
ತಾವೇ ನಾಟಕ ಬರೆದು ಕಲಿಸುತ್ತಿದ್ದ ಪುಷ್ಪಾ ಟೀಚರ್, ಒಂದನೆಯ ಕ್ಲಾಸಿನ ನನ್ನ ಸ್ಕೂಲ್ ಡೇ ಡ್ಯಾನ್ಸ್‌ನ ನೆಪದಲ್ಲಿ ಮುಂದಿನ ಏಳು ವರ್ಷವೂ ನನ್ನನ್ನ ಚಂದಿರ ಅಂತ ಕರೆಯುತ್ತಿದ್ದ ಅಂಜಲಿ ಟೀಚರ್, ಪಾಪದ ಭವಾನಿ ಟೀಚರ್, ನಾನು ಅತಿ ಹೆಚ್ಚು ಬಾರಿ ಜಗಳವಾಡಿರೋ ಕುಸುಮ ಟೀಚರ್, ಪೆಟ್ಟು ಕೊಟ್ಟು ಮೊದಲ ಬಾರಿ ಇಂಗ್ಲಿಷ್ ಕಲಿಸಿದ ಮೇರಿ ಟೀಚರ್… ಇನ್ನೂ ಹಲವರು. ಇವರನ್ನೆಲ್ಲ ಮರೆಯೋಕೆ ಸಾಧ್ಯವೇ ಇಲ್ಲ.
ನಮ್ಮ ಕ್ಲಾಸಿಗೆ ಹೊಸದಾಗಿ ಬಂದ ಲೆಕ್ಚರರ್ ಒಬ್ಬರು ತಾನು ತನ್ನ ಸಂಪೂರ್ಣ ವಿದ್ಯಾರ್ಥಿ ಜೀವನ ಸರಕಾರಿ ಶಾಲೆಯಲ್ಲಿ ಓದಿದ್ದು ಅಂತ ಪರಿಚಯಿಸಿಕೊಂಡಾಗ, ಅವರ ನೆನಪುಗಳನ್ನು ಹಂಚಿಕೊಂಡಾಗ, ಎಲ್ಲಕ್ಕಿಂತ ಹೆಚ್ಚಾಗಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡೋದನ್ನು ಕಂಡಾಗ ನನಗೆ ಆಸೆಯಾಗಿತ್ತು. ನನ್ನ ಸರಕಾರಿ ಶಾಲೆಯ ಸುಂದರ ದಿನಗಳೆಲ್ಲ ಒಮ್ಮೆ ನೆನಪಿಗೆ ಬಂದು ಹೋದವು.
ಅದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರಕಡ. ಈಗ ಅನ್ನಿಸುತ್ತ ಇದೆ. ಸರಕಾರಿ ಶಾಲೆಗೆ ಹೋಗಬಹುದಾಗಿದ್ದರೂ ಹೋಗದೆ, ಈ ಐದು ವರ್ಷಗಳಲ್ಲಿ ನಾನು ಅದೇನೋ ಕಳೆದುಕೊಂಡಿದ್ದೇನೆ. ಸರಕಾರಿ ಶಾಲೆ ನಿಜಕ್ಕೂ ಸ್ವರ್ಗದ ಉದ್ಯಾನವನ.
ಅಥಿಕ್ ಕುಮಾರ್
ವಾಣಿಜ್ಯ ವಿಭಾಗ ಮಂಗಳಗಂಗೋತ್ರಿ, ಕೊಣಾಜೆ