Advertisement

ಸರ್ಕಾರಿ ಶಾಲೆ ಶೌಚಾಲಯ ಸ್ಥಿತಿ ಅಧೋಗತಿ

12:55 PM Dec 17, 2019 | Suhan S |

ಬಸವಕಲ್ಯಾಣ: ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ವತ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳನ್ನು ಬಯಲು ಶೌಚಮುಕ್ತವಾಗಿ ಮಾಡಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಶಾಲೆಗಳಲ್ಲಿರುವ ಬಹುತೇಕ ಶೌಚಾಲಯಗಳು ಶೋಚನೀಯವಾಗಿ ಸ್ಥಿತಿಯಲ್ಲಿದ್ದು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬಯಲು ಶೌಚಕ್ಕೆ ಹೋಗುವಂತಾಗಿದೆ.

Advertisement

ತಾಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿದಂತೆ ಒಟ್ಟು 269 ಶಾಲೆಗಳಿವೆ. 29,018 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ವಿವಿಧ ಯೋಜನೆಯಡಿ ಲಕ್ಷಾಂತರ ರೂ. ಖರ್ಚು ಮಾಡಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆದರೆ ಅವುಗಳ ಸದ್ಯದ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು ವಿದ್ಯಾರ್ಥಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಆದರೆ ಶಿಕ್ಷಣ ಇಲಾಖೆ ವರದಿಯಲ್ಲಿ ಮಾತ್ರ ಶೌಚಾಲಗಳಿವೆ ಎಂದು ಉಲ್ಲೇಖೀಸಲಾಗಿದೆ.

ಶಾಲೆಗಳ ಆವರಣಗಳಲ್ಲಿ ಕೊಳವೆ ಬಾವಿ ಕೊರೆದು, ನೀರಿನ ಟ್ಯಾಂಕ್‌ ಅಳವಡಿಸಿ ಶೌಚಾಲಯದ ಒಳಗಡೆ ಪೈಪ್‌ಲೈನ್‌ ಸಂಪರ್ಕ ನೀಡಿ ಪ್ರತಿವರ್ಷ ನಿರ್ವಹಣೆಗಾಗಿ ಇಂತಿಷ್ಟು ಹಣ ಖರ್ಚಿಗೆ ನೀಡಲಾಗುತ್ತಿದೆ. ಆದರೂ ಸಂಬಂಧ ಪಟ್ಟವರು ಸಂರಕ್ಷಣೆ ಮಾಡದೆ ಇರುವುದರಿಂದ ಬಹುತೇಕ ಶಾಲೆಗಳಲ್ಲಿನ ಶೌಚಾಲಯಗಳು ನೀರಿನ ಟ್ಯಾಂಕ್‌, ಪೈಪ್‌ಲೈನ್‌ ಮತ್ತು ವಿದ್ಯುತ್‌ ತಂತಿಗಳು, ಬಾಗಿಲು ಕಿಟಕಿ ಮುರಿದು ಹಾಳಾಗಿವೆ. ಮತ್ತೆ ಕೆಲವು ಕಡೆ ನೀರಿನ ಸಮಸ್ಯೆ ಹೇಳಿ ಬೀಗ ಜಡಿಯಲಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಇದರಿಂದ ವಿದ್ಯಾರ್ಥಿಗಳು-ಶಿಕ್ಷಕಿಯರು ಶಾಲೆಗಳ ಪಕ್ಕದಲ್ಲಿ ಅಥವಾ ಗಿಡ-ಗಂಟಿಗಳ ಮಧ್ಯ ನಿತ್ಯ ಶೌಚಾಲಯಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ಸಂಬಂಧ ಪಟ್ಟವರನ್ನು ವಿಚಾರಿಸಿದಾಗ ಶಾಲೆ ಬಿಟ್ಟ ನಂತರ ಕಿಡಗೇಡಿಗಳು ಹಾಳು ಮಾಡುತ್ತಿದ್ದಾರೆ. ನೀರಿನ ಸಮಸ್ಯೆಯಿಂದ ಶೌಚಾಲಯಕ್ಕೆ ಬೀಗ ಹಾಲಾಗಿದೆ. ಬಳಸಲಿಕ್ಕೆ ಯೋಗ್ಯ ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ ವಿನಃ ಅವುಗಳನ್ನು ಸಂರಕ್ಷಣೆ ಮಾಡದೆ ಇರುವುದರಿಂದ ಹಾಳಾಗಿವೆ ಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಬಯಲು ಮುಕ್ತ ಶೌಚಾಲಯಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ಶೌಚಾಲಯದ ಜಾಗೃತಿ ಮೂಡಿಸುವ ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಅಧೋಗತಿಗೆ ತಲುಪಿರುವುದು ನೋವಿನ ಸಂಗತಿಯಾಗಿದೆ. ವರ್ಷ ಕಳೆದಂತೆ ನಗರ ಹಾಗೂ ಗ್ರಾಮಗಳು ಬಯಲು ಬಹಿರ್ದೇಶೆ ಮುಕ್ತ ದಾರಿಯಲ್ಲಿದ್ದರೆ, ಅಧಿಕಾರಿ ಹಾಗೂ ಶಿಕ್ಷಕರ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲು ಪ್ರದೇಶ ಅವಲಂಬಿಸಬೇಕಾಗಿದೆ.

Advertisement

 

-ವೀರಾರೆಡ್ಡಿ ಆರ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next