Advertisement

ಆಲಂಕಾರು: ಮುಚ್ಚುವ ಭೀತಿಯಲ್ಲಿದ್ದ ಶಾಲೆಗೆ ಹೆಚ್ಚು ಮಕ್ಕಳು

02:45 AM Jun 15, 2018 | Team Udayavani |

ಆಲಂಕಾರು: ಸರಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಭೀತಿ ಎದುರಿಸುತ್ತಿರುವ ಸಂದರ್ಭದಲ್ಲಿ ಪುತ್ತೂರು ತಾಲೂಕು ಆಲಂಕಾರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಹತ್ತರ ಸಾಧನೆ ಮಾಡಿದೆ. ಕಳೆದ ಬಾರಿ 190 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈ ಬಾರಿ 250ರ ಗಡಿ ದಾಟುವ ನಿರೀಕ್ಷೆಯಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಕರು, ಊರ ಜನತೆಯ ನಿರಂತರ ಶ್ರಮದಿಂದಾಗಿ ಗ್ರಾಮೀಣ ಪ್ರದೇಶದ ಈ ಶಾಲೆ ಜಿಲ್ಲೆಯಲ್ಲೇ ವಿಶೇಷ ಸಾಧನೆಯೊಂದಿಗೆ ಮಾದರಿಯಾಗಿ ಮೂಡಿ ಬಂದಿದೆ. ವಿಷನ್‌ ಪುತ್ತೂರು ಯೋಜನೆಯಡಿ ಶಾಲೆಯನ್ನು ವಿದ್ಯಾರ್ಥಿಗಳ ಹೆತ್ತವರ ಸಹಕಾರದಿಂದ 70 ಸಾವಿರ ರೂ. ವೆಚ್ಚದಲ್ಲಿ ಆಕರ್ಷಕ ಬಣ್ಣ ಬಳಿದು, ಗೋಡೆಯ ತುಂಬಾ ವರ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಶಾಲಾ ಆವರಣವನ್ನು ಹೂಕುಂಡ, ಹೂದೋಟದಿಂದ ಶೃಂಗರಿಸಲಾಗಿದೆ. ಜತೆಗೆ ಸರ್ವ ಧರ್ಮ ಸಮನ್ವಯದ ಏಳು ಬಣ್ಣಗಳ ಏಕತೆಯ ಧ್ವಜವನ್ನು ಹಾಕಲಾಗಿದೆ.

Advertisement

ಕೊಠಡಿ ಬೇಕಿದೆ
ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ತೆರೆಯುವ ಉದ್ದೇಶದಿಂದ ಇದೀಗ ಮೂರು ಕೊಠಡಿಗಳ ಆವಶ್ಯಕತೆಯಿದೆ. ಸ್ಮಾರ್ಟ್‌ ಕ್ಲಾಸನ್ನು ಜೂನ್‌ ಅಂತ್ಯಕ್ಕೆ ಆಥವಾ ಜುಲೈ ತಿಂಗಳಲ್ಲಿ ಆರಂಭಿಸುವ ಗುರಿಯನ್ನು ಹೊಂದಿದ್ದು, 2019ಕ್ಕೆ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ 2 ಲಕ್ಷ ರೂ. ವೆಚ್ಚದ ವಿಶಾಲ ಸ್ಮಾರ್ಟ್‌ ಕ್ಲಾಸ್‌ನ ಥಿಯೇಟರ್‌ ಆರಂಭಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಅಲ್ಲದೆ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.

ಎಲ್‌.ಕೆ.ಜಿ., ಯು.ಕೆ.ಜಿ. ತರಗತಿಗಳು
ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳತ್ತ ಸೆಳೆಯುವ ಉದ್ದೇಶದಿಂದ ಜನಪ್ರತಿನಿಧಿಗಳು, ಶಾಲಾ ಪೋಷಕರ ಮತ್ತು ಊರ ದಾನಿಗಳ ನೆರವಿನಿಂದ ಕಳೆದ ಶೈಕ್ಷಣಿ ಕ ವರ್ಷದಿಂದ ಆಲಂಕಾರು ಸರಕಾರಿ ಶಾಲೆಯಲ್ಲಿ ಎಲ್‌.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಆರಂಭಿಸಲಾಗಿದೆ ಎರಡೂ ತರಗತಿಗಳಿಗೆ ತಲಾ 30 ಮಕ್ಕಳು ಸೇರ್ಪಡೆಗೊಳ್ಳುವುದರ ಮೂಲಕ ಯಶಸ್ಸು ಪಡೆದುಕೊಂಡಿದೆ.

ಸಿಗುವ ಸೌಲಭ್ಯಗಳು
ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಎರಡು ಜೊತೆ ಸಮವಸ್ತ್ರ, ಶೂ, ಸಾಕ್ಸ್‌, ಗುರುತಿನ ಕಾರ್ಡ್‌, ಬಿಸಿಯೂಟ ನೀಡಲಾಗುತ್ತಿದೆ. ಹೊಲಿಗೆಯೊಂದಿಗೆ ಕಂಪ್ಯೂಟರ್‌ ತರಬೇತಿಯನ್ನೂ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ – ಪಂಗಡದ ವಿದ್ಯಾರ್ಥಿಗಳಿಗೆ, ಅಲ್ಪಸಂಖ್ಯಾಕ, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಅಸಹಾಯಕ ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆಯಲಾಗುವುದು. ಶಾಲೆಯಲ್ಲಿ ಮೀನಾ ಕ್ಲಬ್‌, ಸ್ಕೌಟ್ಸ್‌-ಗೈಡ್ಸ್‌, ಗಣಿತ ಕ್ಲಬ್‌, ವಿಜ್ಞಾನ ಕ್ಲಬ್‌, ಸಾಂಸ್ಕೃತಿಕ ಕ್ಲಬ್‌, ಮಕ್ಕಳ ಹಕ್ಕು ಕ್ಲಬ್‌ ಗಳನ್ನು ಮಾಡಿಕೊಳ್ಳಲಾಗಿದೆ. 15 ಸದಸ್ಯರ ಸುಸಜ್ಜಿತ ಬ್ಯಾಂಡ್‌ ಸೆಟ್‌ ತಂಡವಿದೆ. 2019ಕ್ಕೆ ಶಾಲೆ ಸುವರ್ಣ ಮಹೋತ್ಸವ ಆಚರಿಸಲಿದ್ದು, ಇದಕ್ಕಾಗಿ ಬಯಲು ರಂಗ ಮಂದಿರ ನಿರ್ಮಾಣವಾಗುತ್ತಿದೆ. ಶಾಲೆ 2.33 ಎಕ್ರೆ ಜಾಗವನ್ನು ಹೊಂದಿದ್ದು, ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯಗಳನ್ನು ಒಳಗೊಂಡಿದೆ.

ಈ ವರ್ಷ 250 ವಿದ್ಯಾರ್ಥಿಗಳ ಸಂಖ್ಯೆ ದಾಟಲಿದೆ. ಶಾಲೆಯು 11 ಶಿಕ್ಷಕರನ್ನು ಹೊಂದಿದೆ. ಮೈಕ್‌ ಸೆಟ್‌, ಸ್ಟೇಜ್‌ ಸೆಟ್ಟಿಂಗ್‌, ಫೋಕಸ್‌ ಲೈಟ್‌, ಬ್ಯಾಂಡ್‌ ಸೆಟ್‌ ದೇಣಿಗೆ ರೂಪದಲ್ಲಿ ಬಂದಿದೆ. ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ ರೂಢಿಸುವ ಉದ್ದೇಶ ದಿಂದ ದಿನಕ್ಕೆ ಒಬ್ಬ ಶಿಕ್ಷಕರು ಶಾಲೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಶಾಲೆಯ ಶುಚಿತ್ವ, ಬಿಸಿಯೂಟದ ವ್ಯವಸ್ಥೆ ಯನ್ನು ನಿರ್ವಹಿಸಬೇಕು. ಎಲ್ಲ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸುತ್ತಾರೆ.

Advertisement

ಶಾಲೆಯಲ್ಲಿ ಗುಬ್ಬಚ್ಚಿ ಸ್ಪೀಕಿಂಗ್‌
ಒಂದರಿಂದ 4ನೇ ತರಗತಿಗೆ ಮೀಸಲಾಗಿರುವ ಗುಬ್ಬಚ್ಚಿ ಸ್ಪೀಕಿಂಗ್‌ ತರಗತಿಯನ್ನು ಈ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ನ್ಪೋಕನ್‌ ಇಂಗ್ಲಿಷ್‌, ಸೆಂಟೆನ್ಸ್‌ ಪ್ರಾಕ್ಟೀಸ್‌, ಕಥೆಗಳನ್ನು 45 ನಿಮಿಷದ ತರಗತಿಗಳನ್ನು ಪ್ರತೀ ದಿನ ನೀಡಲಾಗುತ್ತಿದೆ. ವಿಶ್ವ ಸಂಸ್ಥೆಯ ಯುನಿಸೆಫ್ ಪ್ರಾಯೋಜಕತ್ವದಲ್ಲಿ ಚೆನ್ನೈ ಮೂಲದ ಕಂಪೆನಿಯೊಂದು ಶಾಲೆಯ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕಲಿಕಾ ತರಗತಿಗಳನ್ನು ನಡೆಸುತ್ತಿದೆ. ಇದಕ್ಕಾಗಿ ಕಂಪೆನಿ 40 ಇಂಚಿನ ಎಲ್‌ಇಡಿ ಟಿವಿಯನ್ನು ಅಳವಡಿಸಿದೆ. 70 ಸಾವಿರ ರೂ. ಮೊತ್ತದ ಕಲಿಕೆ ಸಾಮಗ್ರಿಗಳನ್ನೂ ಶಾಲೆಗೆ ನೀಡಿದೆ. ಶಿಕ್ಷಕರಿಗೆ ವಿಶೇಷ ತರಬೇತಿಯನ್ನೂ ಕೊಡಿಸಿದೆ.

ಶಾಲಾ ವಾಹನಕ್ಕೆ ಆದ್ಯತೆ
ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ಈ ವರ್ಷ ಒಂದು ಖಾಸಗಿ ವಾಹನವನ್ನು ಗುರುತಿಸಿಕೊಂಡು ಮಕ್ಕಳ ಹೆತ್ತವರ ಸಹಕಾರದಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ವಾಹನವನ್ನು ಹೆಚ್ಚಿಸುವ ಚಿಂತನೆಯಿದೆ. ಸರಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬುವುದನ್ನು ತೋರಿಸುವುದೇ ನಮ್ಮ ಉದ್ದೇಶ.
– ಕೆ.ಪಿ. ನಿಂಗರಾಜು, ಮುಖ್ಯಗುರು

— ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next