Advertisement

ಸರ್ಕಾರಿ ಶಾಲೆ ಸ್ಥಿತಿ ದೇವರಿಗೇ ಪ್ರೀತಿ

10:39 AM Jul 15, 2019 | Suhan S |

ಕೊಪ್ಪಳ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿ ತಿಂಗಳು ಪೂರೈಸಿದೆ. ಆದರೆ ರಾಜ್ಯ ಶಿಕ್ಷಣ ಇಲಾಖೆ ಜಿಲ್ಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಪೂರೈಸಿಲ್ಲ. ಜಿಲ್ಲೆಯ 30,694 ವಿದ್ಯಾರ್ಥಿಗಳಿಗೆ ಸಮವಸ್ತ್ರದ ಕೊರತೆಯಾಗಿದ್ದು, ಹಂತ ಹಂತವಾಗಿ ಪೂರೈಕೆಯಾಗಲಿವೆ ಎನ್ನುವ ಮಾತು ಇಲಾಖೆಯಲ್ಲಿ ಕೇಳಿ ಬಂದಿವೆ.

Advertisement

ರಾಜ್ಯ ಸರ್ಕಾರವು ಪ್ರತಿ ಮಗು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳೂ ಶಾಲೆಗೆ ಪ್ರವೇಶಾತಿ ಪಡೆದು ಶಿಕ್ಷಣದ ಬಗ್ಗೆ ಕಾಳಜಿ ತೋರಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಪ್ರಾಥಮಿಕ ಹಂತದಲ್ಲಿ ಹಲವು ಯೋಜನೆ ಜಾರಿ ಮಾಡುತ್ತಿದೆ. ಆ ಯೋಜನೆಗಳಲ್ಲಿ ಸಮವಸ್ತ್ರಗಳ ಪೂರೈಕೆಯೂ ಒಂದಾಗಿದೆ.

ವಿಶೇಷವಾಗಿ, ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಪಾಲಕರಿಗೆ ಆರ್ಥಿಕ ತೊಂದರೆ ಇರುತ್ತೆ. ಕೆಲವೊಂದು ಸಂದರ್ಭದಲ್ಲಿ ಸಕಾಲಕ್ಕೆ ಮಕ್ಕಳಿಗೆ ಸಮವಸ್ತ್ರ ಕೊಡಿಸಲು ಆಗುವುದಿಲ್ಲ. ಈ ಹಿಂಜರಿಕೆಯಿಂದ ಮಕ್ಕಳು ಶಾಲೆ ಬಿಡುವ ಪರಿಸ್ಥಿತಿ ಎದುರಾಗುತ್ತಿವೆ. ಇನ್ನೂ ಶಾಲೆಗಳಲ್ಲಿ ಶ್ರೀಮಂತ ಮಕ್ಕಳು ಉತ್ತಮ ಬಟ್ಟೆ ಧರಿಸಿದ್ದರೆ, ಬಡ ಮಕ್ಕಳಿಗೆ ಬಟ್ಟೆಗಳ ಕೊರತೆ ಇರುವುದನ್ನು ಅವಲೋಕಿಸಿ ಸರ್ಕಾರವು ಶಾಲೆಗಳಲ್ಲಿ ಪ್ರತಿಯೊಬ್ಬರಿಗೂ ಸಮವಸ್ತ್ರ ಕೊಡಲು ನಿರ್ಧರಿಸಿ ಈ ಯೋಜನೆ ಆರಂಭಿಸಿದೆ. ಯೋಜನೆಯ ಉದ್ದೇಶವೇನೋ ಉತ್ತಮವಾಗಿದೆ. ಆದರೆ ಸಕಾಲಕ್ಕೆ ಮಕ್ಕಳಿಗೆ ಸಮವಸ್ತ್ರ ತಲುಪಿಲ್ಲ ಎನ್ನುವುದೇ ಬೇಸರದ ಸಂಗತಿ.

ಪ್ರಸಕ್ತ ವರ್ಷ ಜಿಲ್ಲೆಯ 1,96,171 ವಿದ್ಯಾರ್ಥಿಗಳಿಗೆ ರಾಜ್ಯ ಇಲಾಖೆಯು ಸಮವಸ್ತ್ರ ಪೂರೈಕೆ ಮಾಡಬೇಕಿತ್ತು. ಆದರೆ ಕೊಪ್ಪಳ ತಾಲೂಕಿಗೆ 41,809, ಕುಷ್ಟಗಿ ತಾಲೂಕಿಗೆ 42,099, ಗಂಗಾವತಿ ತಾಲೂಕಿಗೆ 46,050 ಹಾಗೂ ಯಲಬುರ್ಗಾ ತಾಲೂಕಿಗೆ 35,519 ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಪೂರೈಕೆ ಮಾಡಿದೆ. ಇನ್ನೂ ಜಿಲ್ಲಾದ್ಯಂತ 30,694 ವಿದ್ಯಾರ್ಥಿಗಳಿಗೆ ಇಲಾಖೆ ಸಮವಸ್ತ್ರ ಪೂರೈಸಿಲ್ಲ.

Advertisement

ಸಮವಸ್ತ್ರಗಳ ಪೂರೈಕೆಯ ಕುರಿತು ಸರ್ಕಾರವು ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಪೂರೈಕೆಯಾಗಲಿದೆ. ನಿಯಮದ ಪ್ರಕಾರ, ಶಾಲಾ ಆರಂಭದ ದಿನದಂದೇ ಕೊಡಬೇಕು ಎಂದು ಹೇಳುತ್ತದೆ. ಆದರೆ ಕೆಲ ತೊಂದರೆಯಿಂದ ಸಕಾಲಕ್ಕೆ ಪೂರೈಕೆ ಮಾಡಲು ಆಗುತ್ತಿಲ್ಲ. ನಮ್ಮ ಮಕ್ಕಳ ದಾಖಲಾತಿ ರಾಜ್ಯ ಇಲಾಖೆಯಲ್ಲಿ ಇರುತ್ತೆ. ರಾಜ್ಯ ಮಟ್ಟದಲ್ಲಿ ಏಕಕಾಲಕ್ಕೆ ಪೂರೈಕೆಯಾಗಬೇಕಾಗಿರುವುದರಿಂದ ಕೆಲವಿ ಬಾರಿ ವಿಳಂಬವಾಗಲಿದೆ. ಹಂತ ಹಂತವಾಗಿ ಮಗುವಿಗೆ ಸಮವಸ್ತ್ರ ಪೂರೈಕೆಯಾಗಲಿದೆ. ಇದರಲ್ಲಿ ಯಾವುದೇ ತೊಂದರೆಯಾಗಲ್ಲ. ಸಮವಸ್ತ್ರ ಕೊರತೆ ಇರುವ ಎಲ್ಲ ಶಾಲೆಗಳಿಗೂ ಪೂರೈಕೆಯಾಗಲಿದೆ ಎನ್ನುವ ಮಾತನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಶಿಕ್ಷಣ ಇಲಾಖೆ ನಿಯಮದ ಪ್ರಕಾರ ಶಾಲೆಗಳು ಮೇ 29ರಿಂದಲೇ ಆರಂಭವಾಗುತ್ತವೆ. ಶಾಲೆ ಆರಂಭವಾದ ದಿನದಂದೇ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡಬೇಕು ಎಂಬ ನಿಯಮ ಇದೆ. ಜೊತೆಗೆ ಶಿಕ್ಷಣ ಇಲಾಖೆಯು ಮೇ 29ರೊಳಗಾಗಿ ರಜಾ ದಿನಗಳಲ್ಲಿಯೇ ಆಯಾ ಶಾಲೆಗಳಿಗೆ ಸಮವಸ್ತ್ರ ಪೂರೈಕೆ ಮಾಡಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಟೆಂಡರ್‌ ಪಡೆಯುವ ಕಂಪನಿಗಳು ಸಕಾಲಕ್ಕೆ ಸಮವಸ್ತ್ರ ಪೂರೈಸಲ್ಲ ಎನ್ನುವ ಆಪಾದನೆಯೂ ಇದೆ. ಶಾಲೆ ಆರಂಭದ ದಿನದಂದೇ ಮಕ್ಕಳಿಗೆ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಮಾಡಿದರೆ ಆ ಮಗು ಸಮವಸ್ತ್ರವನ್ನು ಸಿದ್ಧಪಡಿಸಿಕೊಂಡು ಶಾಲೆಗೆ ಧರಿಸಿಕೊಂಡು ಬರಬೇಕು. ಆದರೆ ಸರ್ಕಾರವೇ ಈ ರೀತಿ ನಿಧಾನಗತಿ ಮಾಡಿದರೆ ಮಕ್ಕಳಿಗೆ ತೊಂದರೆಯಾಗಲಿದೆ ಎನ್ನುವ ಬೇಸರದ ಮಾತು ಪಾಲಕರಲ್ಲಿ ಕೇಳಿ ಬಂದಿದೆ. ಸರ್ಕಾರ ಇಂತಹ ಸೂಕ್ಷ್ಮತೆಗಳನ್ನು ಅರಿತು ಸಕಾಲಕ್ಕೆ ಮಕ್ಕಳಿಗೆ ಸಮವಸ್ತ್ರ ಸೇರಿ ಅಗತ್ಯ ಸಾಮಗ್ರಿ ಪೂರೈಕೆಗೆ ಕ್ರಮವಹಿಸಬೇಕಿದೆ.
•ದತ್ತು ಕಮ್ಮಾರ
Advertisement

Udayavani is now on Telegram. Click here to join our channel and stay updated with the latest news.

Next