ಚಿಂಚೋಳಿ: ಸೇಡಂ ವಿಧಾನಸಭೆ ಮತಕ್ಷೇತ್ರಕ್ಕೆ ಒಳಪಟ್ಟಿರುವ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ಹೊಸದಾಗಿ ಸರ್ಕಾರಿ ಪ್ರೌಢಶಾಲೆ ಮಂಜೂರಿಯಾಗಿದೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.
ರಾಜ್ಯ ಸರಕಾರದ ವತಿಯಿಂದ 95ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ಸರ್ಕಾರ ಮಂಜೂರಾತಿ ನೀಡಿ, ಆದೇಶಿಸಿದ್ದರಿಂದ ಶಿಕ್ಷಣ ಸಚಿವರು ನಿಡಗುಂದಾ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆ ಮಂಜೂರಿಗೊಳಿಸಿದ್ದಾರೆ.
ಹೊಸ ಸರಕಾರಿ ಪ್ರೌಢ ಶಾಲೆ ಮಂಜೂರಿಯಿಂದಾಗಿ ಜಟ್ಟೂರ, ಹಲಕೋಡಾ, ಶಿರೋಳಿ, ಕರ್ಚಖೇಡ, ಹೂವಿನಹಳ್ಳಿ, ವೆಂಕಟಾಪುರ, ಹಲಕೋಡಾ, ಕೊಡಂಪಳ್ಳಿ, ಚತ್ರಸಾಲಾ ಗ್ರಾಮಗಳ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.
ನಿಡಗುಂದಾ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆ ಬೇಡಿಕೆ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಕಳೆದ ತಿಂಗಳು ನಡೆದ ಜನಸ್ಪಂದನಾ ಸಭೆಯಲ್ಲಿ ಮನವಿ ಮಾಡಿದ್ದರು. ಅವರ ಬೇಡಿಕೆ ಈಡೇರಿಸಿ, ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಾಲೆಗಳ ಉನ್ನತೀಕರಣಕ್ಕೆ ಆದೇಶಿಸಿದ್ದರಿಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರನ್ನು ಶಾಸಕ ರಾಜಕುಮಾರ ಪಾಟೀಲ ಸನ್ಮಾನಿಸಿ, ಅಭಿನಂದಿಸಿದರು. ಬಿಜೆಪಿ ಮುಖಂಡ ಮುಕುಂದ ದೇಶಪಾಂಡೆ,ಜಿಪಂ ಮಾಜಿ ಸದಸ್ಯ ಶರಣು ಮೆಡಿಕಲ್ ಈ ಸಂದರ್ಭದಲ್ಲಿದ್ದರು.