ಬೈಲಹೊಂಗಲ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಆಟದ ಮೈದಾನ ತುಂಬಾ ಕೊಳಚೆ ನೀರು ನಿಂತು, ಸಾಂಕ್ರಾಮಿಕ ರೋಗಗಳ ಆಹ್ವಾನ ನೀಡುತ್ತಿದೆ.
ಈ ಶಾಲೆ ಸುಮಾರು ಐದು ಎಕರೆ ಪ್ರದೇಶವನ್ನು ಹೊಂದಿದ್ದು, ಆಟದ ಮೈದಾನಲ್ಲಿ ಕೊಳಚೆ ನೀರು ನಿಂತು ಸೊಳ್ಳೆಗಳು, ಕೀಟಗಳ ತಾಣವಾಗಿದೆ. ಅಲ್ಲದೆ ಶಾಲೆಯ ಆವರಣಕ್ಕೆ ಹಂದಿಗಳು ನುಗ್ಗಿ ಮತ್ತಷ್ಟು ಕೊಳಚೆ ಹೆಚ್ಚಾಗುವಂತೆ ಮಾಡುತ್ತಿವೆ.
ಶಾಲೆಯಲ್ಲಿ ಡೆಂಘೀ ಪ್ರಕರಣ: ಕಳೆದ ಎರಡು ವರ್ಷಗಳ ಹಿಂದೆ ಈ ಆವರಣದಲ್ಲಿ ಕೊಳಚೆ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಂದ ಡೆಂಘೀ ತಗುಲಿದ ಎರಡು ಮಕ್ಕಳು ಆಸ್ಪತ್ರೆಗೆ ಸೇರಿಸಿದ್ದರೆನ್ನುವದನ್ನು ಮರೆಯುವಂತಿಲ್ಲ. ಹತ್ತು ವರ್ಷಗಳ ಹಿಂದೆ ಪಟ್ಟಣದ ಹಣಮಂತದೇವರ ಗುಡಿಯಲ್ಲಿ ಪ್ರಾರಂಭವಾದ ಶಾಲೆಯಲ್ಲಿ 500ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಇದ್ದರು. ಆದರೆ ಈಗಿರುವ ಪ್ರದೇಶಕ್ಕೆ ಶಾಲೆಯ ಪ್ರಾರಂಭಿಸಿದೊಡನೆ ಕೊಳಚೆ ತಾಣವಾಗಿ ಮಾರ್ಪಟ್ಟು ಡೆಂಘೀ ಪ್ರಕರಣ ಕಂಡು ಬಂದ ಸಂದರ್ಭದಿಂದ ಇಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗ ತೊಡಗಿದೆ ಎಮದು ನಾಗರಿಕರು ಆರೋಪಿಸಿದ್ದಾರೆ.
ಇಲ್ಲಿ ಶಾಶ್ವತವಾಗಿ ಕೊಳಚೆ ನಿವಾರಣೆಯಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣವಾಗಬೇಕು. ಸಾಕಷ್ಟು ಪ್ರಮಾಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವದರಿಂದ ಅದನ್ನು ತೆಗೆದು ಹಾಕಿಸಿ ಹಂದಿ, ನಾಯಿಗಳು ಇಲ್ಲಿ ಬರದಂತೆ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ. ಶಾಲೆಯ ಆವರಣ ಸ್ವಚ್ಛ,ಸುಂದರವಾಗಿ ಕಾಣುವಂತೆ ಮಾಡಬೇಕಿದೆ. ಶಾಲೆಗೆ ಉತ್ತಮ ಗೇಟ್ ನಿರ್ಮಾಣ ಮಾಡಿ ಯಾವುದೇ ಅನ್ಯ ವ್ಯಕ್ತಿಗಳು ಪ್ರವೇಶಿಸದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಶಾಲೆ ನಂ.2 ರ ಬಳಿಯ ಚರಂಡಿ ನೀರು ನಿಂತು ವಾತಾವರಣ ಹಾಳಾಗಿದೆ. ಆರೋಗ್ಯ ಇಲಾಖೆಗೆ ಹೇಳಿ ಔಷಧ ಸಿಂಪಡಣೆಗೆ ಹೇಳಲಾಗಿದೆ. ಪುರಸಭೆ ಇದರ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಲು ತಿಳಿಸಲಾಗಿದೆ.
•ಪಾರ್ವತಿ ವಸ್ತ್ರದ ಬಿಇಒ ಬೈಲಹೊಂಗಲ.
•ಸಿ.ವೈ. ಮೆಣಶಿನಕಾಯಿ